ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಪ್ರಥಮ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಪೂರ್ವಭಾವಿ ಸಭೆ ಶನಿವಾರ ಕುವೆಂಪು ಕನ್ನಡ ಭವನದಲ್ಲಿ ನಡೆಯಿತು.
- ಕಸಾಪ ಅಧ್ಯಕ್ಷ ವಾಮದೇವಪ್ಪ ಮಾಹಿತಿ । ಮಹಿಳಾ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಪ್ರಥಮ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಪೂರ್ವಭಾವಿ ಸಭೆ ಶನಿವಾರ ಕುವೆಂಪು ಕನ್ನಡ ಭವನದಲ್ಲಿ ನಡೆಯಿತು.ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿಯೇ ನಡೆಸಬೇಕು. ಸಮ್ಮೇಳನದಲ್ಲಿ ನಡೆಯುವ ವಿವಿಧ ಗೋಷ್ಠಿಗಳು, ಸರ್ವಾಧ್ಯಕ್ಷತೆ ಮುಂತಾದ ಪ್ರಮುಖ ವಿಷಯಗಳನ್ನು ಎಲ್ಲರ ಅಭಿಪ್ರಾಯ ಪಡೆದು ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು. ಸಮ್ಮೇಳನದಲ್ಲಿ ಹೆಚ್ಚಾಗಿ ಸ್ತ್ರೀ ಅಸ್ಮಿತೆ, ಸ್ತ್ರೀ ಸಂವೇದನೆ ಮುಂತಾದ ಸ್ತ್ರೀಪರ ವಿಷಯಗಳ ಚರ್ಚೆಗೆ ಒತ್ತು ಕೊಡಲಾಗುವುದು ಎಂದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿರುವುದು ಇದೇ ಮೊದಲಾಗಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯಾವುದೇ ಹಣಕಾಸು ನೆರವು ಸಿಗದೇ ಇರುವುದರಿಂದ ದಾನಿಗಳ ಸಹಕಾರದಿಂದಲೇ ಸಮ್ಮೇಳನ ನಡೆಸಬೇಕಾಗಿದೆ. ಜಿಲ್ಲೆಯ ಎಲ್ಲ ಮಹಿಳಾ ಸಂಘ ಸಂಸ್ಥೆಗಳು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಲು ಅವರು ಮನವಿ ಮಾಡಿದರು.ಸಭೆಯಲ್ಲಿ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ವಿಷಯಗಳ ಬಗ್ಗೆ ವಿಸ್ತ್ರತವಾದ ಚರ್ಚೆ ನಡೆಸಲಾಯಿತು. 2 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಪ್ರಮುಖವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ಎರಡು ಗೋಷ್ಠಿಗಳು, ಒಂದು ಕವಿಗೋಷ್ಠಿ, ಒಂದು ವಿಶೇಷ ಉಪನ್ಯಾಸ, ಜಿಲ್ಲೆಯ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭವನ್ನು ಒಳಗೊಂಡು ನಡೆಸಲು ಸಭೆ ನಿರ್ಧರಿಸಿತು. ಹಾಗೆಯೇ 2 ದಿನಗಳ ಕಾಲ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕೊಡಲು ತೀರ್ಮಾನಿಸಲಾಯಿತು.
ಸಮ್ಮೇಳನದ ಸಂಚಾಲಕಿ ವೀಣಾ ಕೃಷ್ಣಮೂರ್ತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾ ಗಣೇಶ ಶೇಟ್, ಕದಳಿ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಶಿವಕುಮಾರ, ಹೇಮಾ ಶಾಂತಪ್ಪ ಪೂಜಾರಿ, ಸುವರ್ಣಮ್ಮ ಶಿವಮೂರ್ತಿ, ಮಲ್ಲಮ್ಮ ನಾಗರಾಜ, ಭೈರವೇಶ್ವರ, ಓಂಕಾರಮ್ಮ ರುದ್ರಮುನಿ ಸ್ವಾಮಿ, ನಂದಿನಿ ಕಂಬಿನಾಳ್, ಕುಸುಮ ಲೋಕೇಶ್,ಬಿಂದು ರಾಂಪುರ, ಪಿ.ವೀಣಾ, ಪತ್ರಕರ್ತರಾದ ಎ.ಬಿ.ರುದ್ರಮ್ಮ, ದೇವಿಕಾ ಸುನಿಲ್, ಗಾಯತ್ರಿ ವಸ್ತ್ರದ್, ಸುನಂದಾ ವರ್ಣೇಕರ್, ಉಮಾದೇವಿ ಹಿರೇಮಠ, ವಕೀಲೆ ಸುಧಾ, ಮಂಜುಳಾ ಸುನಿಲ್, ನೂರ್ ಜಹಾನ್, ಗಾಯತ್ರಿ ಹಾಲೇಶ, ಮಮತಾ ನಾಗರಾಜ, ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು.- - -
-14ಕೆಡಿವಿಜಿ34:ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಪೂರ್ವಭಾವಿ ಸಭೆ ನಡೆಯಿತು.