ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟಾ
ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿ ಜೊತೆಗೆ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ವಿದ್ಯುತ್ ಪೂರೈಕೆ, ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.ಹೊನವಾಡ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಕೆ.ಆರ್.ಐ.ಡಿ.ಎಲ್‌ನಿಂದ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ತಿಕೋಟಾ ಪಪಂ ಕಚೇರಿ ಬಳಿ ಪಟ್ಟಣದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಮತ್ತು ಗೈರಾಣ ಕಾಲೋನಿಯ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಪಪಂ ವತಿಯಿಂದ ₹1.12 ಕೋಟಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ವಾರ್ಡ್‌ವಾರು ಬೇಡಿಕೆಗಳನ್ನು ಕ್ರೋಢೀಕರಿಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ವರದಿ ನೀಡಬೇಕು ಎಂದು ಪಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಯ ಮಾದರಿಯಲ್ಲಿ ಶಿಕ್ಷಣ, ಕೈಗಾರಿಕೆ, ವಿದ್ಯುತ್ ಹಾಗೂ ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದರು.ಬಬಲೇಶ್ವರ ಮತಕ್ಷೇತ್ರದಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ನಾನಾ ಕೈಗಾರಿಕೋದ್ಯಮಿಗಳಿಂದ ಸಿ.ಎಸ್.ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಕಾನ್ವೆಂಟ್ ಮಾದರಿಯಲ್ಲಿ ಶಿಕ್ಷಣ ಒದಗಿಸುತ್ತಿದ್ದಾರೆ ಎಂದರು.ಈ ಎರಡೂ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಹೊನವಾಡ ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಗೊಂಡ ಚಾವರ, ಸಿದ್ದು ಬೆಳಗಾವಿ, ವಿಜಯಕುಮಾರ ಹಿರೇಮಠ, ಅಕ್ಬರ ತಿಕೋಟ, ಸಾಬು ಖಂಡೇಕಾರ, ದುಂಡಪ್ಪ ವಾಲಿಕಾರ, ಶ್ರೀಕಾಂತ ಕುಂಬಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ಪಿಡಿಒ ಶೋಭಾ ಸಿಳೀನ ಇದ್ದರು.ತಿಕೋಟಾ ಕಾರ್ಯಕ್ರಮದಲ್ಲಿ ಮುಖಂಡರಾದ ವಿಜುಗೌಡ ಪಾಟೀಲ, ಆರ್.ಬಿ.ದೇಸಾಯಿ, ಭೀಮು ಹಂಗರಗಿ, ಸಂತೋಷ ಕೋಲಾರ , ಮಲ್ಲಿಕಾರ್ಜುನ ಹಂಜಗಿ, ಬಸಯ್ಯ ವಿಭೂತಿಮಠ, ಭಾಗೀರಥಿ ತೇಲಿ, ಮಮ್ಮು ಮುಜಾವರ, ಲೇಪು ಕೊಣ್ಣೂರ, ಹಾಜಿಬಾ ಕೋಟ್ಟಲಗಿ, ರಾಜಕುಮಾರ ಸುಣಗಾರ, ಪಂಪಂ ಅಧಿಕಾರಿ ರಾಘವೇಂದ್ರ ನಡುವಿನಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ಚಂದ್ರಶೇಖರ ಕಡಿಬಾಗಿಲ,ಯಮನಪ್ಪ ಮಲ್ಲಕನವರ ಗ್ರಾಮಸ್ಥರು ಉಪಸ್ಥಿತರಿದ್ದರು.