ಸಾರಾಂಶ
- ಉಪ ಕೃಷಿ ನಿರ್ದೇಶಕರ ಕಚೇರಿ- ರೈತ ತರಬೇತಿ ಕೇಂದ್ರ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಿದರೆ ರೈತರು ಆರ್ಥಿಕವಾಗಿ ಸಬಲರಾಗಬಲ್ಲರು. ಈ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ರೈತರು ಮಿಶ್ರಬೆಳೆ ಬೇಸಾಯಕ್ಕೆ ಒತ್ತು ಕೊಡಬೇಕು. ಈ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ ಹಾಗೂ ತರಬೇತಿ ನೀಡಬೇಕಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ಶುಕ್ರವಾರ ಪಟ್ಟಣದ ಹೊರವಲಯದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಉಪ ಕೃಷಿ ನಿರ್ದೇಶಕರ ಕಚೇರಿ ಹಾಗೂ ರೈತ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿಗೆ ರೈತರು ಒಂದೇ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ. ಇದು ಭವಿಷ್ಯತ್ತಿನಲ್ಲಿ ರೈತರು ತೊಂದರೆಗೆ ಒಳಗಾಗಬಹುದು. ಆದ್ದರಿಂದ ಮಿಶ್ರಬೆಳೆಗೆ ರೈತರು ಆದ್ಯತೆ ನೀಡಲಿ ಎಂದರು.
ಇವತ್ತು ಅಡಕೆಗೆ ಹೆಚ್ಚು ಬೆಲೆ ಇದೆ ಎಂದು ಎಲ್ಲರೂ ಅಡಕೆ ಬೆಳೆಗೆ ಮುಂದಾಗುತ್ತಿದ್ದಾರೆ. ಆದರೆ, ಅಡಕೆಗೆ ಇವತ್ತಿನ ಬೆಲೆಯೇ ಸ್ಥಿರವಾಗಿರುತ್ತದೆ ಎಂದು ಗ್ಯಾರಂಟಿ ಇಲ್ಲ. ಅದನ್ನು ರೈತರಿಗೆ ಅಧಿಕಾರಿಗಳು ಮನದಟ್ಟು ಮಾಡಿಕೊಡಬೇಕು ಎಂದ ಅವರು, ರೈತರು ಕೃಷಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕರ್ತವ್ಯ ಮೆರೆಯಬೇಕು ಎಂದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನೂತನ ಕಚೇರಿಯಲ್ಲಿ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ಮೂರು ತಾಲೂಕಿನ ರೈತರಿಗೆ ಯಾವ ಬೆಳೆಗಳನ್ನು ಬೆಳೆದರೆ ಎಷ್ಟು ಆದಾಯ ಸಿಗುತ್ತದೆ, ಅದರ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ತರಬೇತಿ ನೀಡಿದರೆ ರೈತರು ಕೃಷಿಯಲ್ಲಿ ಆದಾಯ ನೋಡುತ್ತಾರೆ. ಇಲ್ಲದಿದ್ದರೆ ಬೆಳೆ ನಷ್ಟ ಎಂದು ಆಕಾಶದತ್ತ ಮುಖ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಏಕ ಬೆಳೆ ಹಾಗೂ ಮಿಶ್ರಬೆಳೆ ಬೆಳೆಯಲು ತಗಲುವ ಖರ್ಚು- ವೆಚ್ಚಗಳನ್ನು ತಿಳಿಸಬೇಕು, ಆದಾಯ ಹೇಗೆ ಪಡೆಯಬಹುದು ಎಂದೂ ತಿಳಿಸಬೇಕು. ಆಗ ಮಾತ್ರ ರೈತರು ಮಿಶ್ರಬೆಳೆ ಕಡೆ ಮನಸ್ಸು ಮಾಡುತ್ತಾರೆ ಎಂದರು.ಕೃಷಿ ಉಪನಿರ್ದೇಶಕ ರೇವಣ್ಣಸಿದ್ದನಗೌಡ ಮಾತನಾಡಿ, ನೂತನ ಕಚೇರಿಯಲ್ಲಿ ನಿತ್ಯ ತರಬೇತಿ ಕೊಡಲು ನಾವು ಸಿದ್ಧರಾಗಿದ್ದೇವೆ. ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಎಲ್ಲ ಆಸಕ್ತ ರೈತರಿಗೆ ತರಬೇತಿ ನೀಡುತ್ತೇವೆ. ಪ್ರಗತಿಪರ ರೈತರನ್ನು ಕರೆಸಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಗಳಿಸುವ ಬಗ್ಗೆಯೂ ತಿಳಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಪುರಸಭೆ ಅಧ್ಯಕ್ಷ ಮೈಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಸಣ್ಣಕ್ಕಿ ಬಸವನಗೌಡ, ಎ.ಜಿ. ಪ್ರಕಾಶ್, ಮಧುಗೌಡ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ, ಕೃಷಿ ಉಪನಿರ್ದೇಶಕ ತಿಪ್ಪೇಸ್ವಾಮಿ, ಕೃಷಿ ಅಧಿಕಾರಿ ಆತೀಕ್ ಉಲ್ಲಾ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.- - - -8ಎಚ್.ಎಲ್,ಐ2:
ಹೊನ್ನಾಳಿ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾದ ಕೃಷಿ ಉಪನಿರ್ದೇಶಕರ ಕಚೇರಿ ಹಾಗೂ ತರಬೇತಿ ಕೇಂದ್ರವನ್ನು ಸಂಸದೆ ಡಾ. ಪ್ರಭಾ ಉದ್ಘಾಟಿಸಿದರು. ಶಾಸಕ ಡಿ.ಜಿ.ಶಾಂತನಗೌಡ, ಎಚ್.ಬಿ.ಮಂಜಪ್ಪ, ಡಿ.ಜಿ.ವಿಶ್ವನಾಥ್ ಸಣ್ಣಕ್ಕಿ ಬಸನಗೌಡ, ಪುರಸಭೆ ಅಧ್ಯಕ್ಷ ಮೈಲಪ್ಪ, ಇತರೆ ಗಣ್ಯರು ಇದ್ದರು.