ಸಾರಾಂಶ
ಅರಕಲಗೂಡು: ಸಮಾಜದ ಉನ್ನತಿಗೆ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಇದನ್ನ ಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಕ್ಕಳಿಗೆ ಶಿಕ್ಷಣದೊಂದಿಗೆ ಪೌಷ್ಟಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೌಕರರ ಸಂಖ್ಯೆಯಲ್ಲಿ ಶೇ.35-40 ರಷ್ಟು ಶಿಕ್ಷಕರನ್ನೇ ಹೊಂದಿರುವ ದೊಡ್ಡ ಇಲಾಖೆಯಾಗಿದ್ದು, ಸಮಾಜದಲ್ಲಿ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ನಮ್ಮ ಇಲಾಖೆಯಲ್ಲಿ ರಾಜ್ಯದಲ್ಲಿ 56 ಸಾವಿರ ಸರ್ಕಾರಿ ಶಾಲೆಗಳಿದ್ದು, 57 ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಖಾಸಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಒಳಗೊಂಡರೆ 1.08 ಕೋಟಿ ಮಕ್ಕಳು ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಅರಿತಿದ್ದೇನೆ. ಒಂದೇ ಬಾರಿ ಸರಿದೂಗಿಸಲು ಸಾಧ್ಯವಿಲ್ಲ. ಹಂತಹಂತವಾಗಿ ನಿಮ್ಮೆಲ್ಲರ ಬೇಡಿಕೆಯನ್ನು ಈಡೇರಿಸುವೆ ಎಂದು ತಿಳಿಸಿದರು.ಶಿಕ್ಷಕರ ನೇಮಕಾತಿ: ಹಲವಾರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಮಾಡುವಲ್ಲಿ ವಿಳಂಬವಾಗಿದನ್ನು ಕಂಡು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ನನ್ನ 15 ತಿಂಗಳ ಕಾಲಾವಧಿಯಲ್ಲಿ ಮುಖ್ಯಮಂತ್ರಿಗಳ ಸಹಕಾರದೊಂದಿಗೆ 12500 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇನ್ನು 3 ತಿಂಗಳಲ್ಲಿ ಉಳಿದಿರುವ 1 ಸಾವಿರ ಶಿಕ್ಷಕರ ನೇಮಕಾತಿಯನ್ನು ಮಾಡಲಾಗುವುದು. ಆದರೂ ಮಕ್ಕಳ ಅನುಗುಣಕ್ಕಾಗಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಯ್ಕೆ ಮಾಡುವುದಾಗಿ ತಿಳಿಸಿದರು.ಈಗಾಗಲೇ ರಾಜ್ಯದಲ್ಲಿ 45 ಸಾವಿರ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಇವರುಗಳಿಗೆ ಮೂರು ತಿಂಗಳದ ವೇತನ ಆಗಿರಲಿಲ್ಲ, ಕಳೆದ 3 ದಿನಗಳ ಹಿಂದೆ ಅವರ ವೇತನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಪೌಷ್ಠಿಕ ಆಹಾರ ದಿನಗಳು: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಬಡತನದ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚು ಕಾಡುತ್ತಿರುವುದನ್ನು ಮನಗಂಡು ರಾಜ್ಯ ಸರ್ಕಾರ ಮಕ್ಕಳ ಪೌಷ್ಠಿಕತೆ ಹೆಚ್ಚಿಸುವ ದೃಷ್ಟಿಯಿಂದ ರಾಗಿ ಮಾಲ್ಟ್ ಮತ್ತು ಕೋಳಿ ಮೊಟ್ಟೆಯನ್ನು ವಾರದ 6 ದಿನಗಳು ನೀಡಲು ನಿರ್ಣಯಿಸಿದೆ. ಈ ಕಾರ್ಯಕ್ಕೆ ಸಹಕರಿಸುತ್ತಿರುವ ಅಜೀಂ ಪ್ರೇಮ್ ಜಿ ರವರ ಸಹಕಾರವನ್ನು ಮರೆಯಲಾಗದು. ಮಕ್ಕಳಿಗಾಗಿ 1591 ಕೋಟಿ ಹಣವನ್ನು ಈ ಯೋಜನೆಗೆ ನೀಡುತ್ತಿದ್ದಾರೆ. ಇವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮಕ್ಕಳ 10 ತಿಂಗಳ ಶಾಲಾ ಸಮಯದಲ್ಲಿ 160 ಕೋಟಿ ಕೋಳಿ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. 20 ವರ್ಷಗಳಲ್ಲಿ ಆಗದ ಶೈಕ್ಷಣಿಕ ಪ್ರಗತಿ ಕೇವಲ 15 ತಿಂಗಳಲ್ಲಿ ಮಾಡಲಾಗುತ್ತಿದೆ ಎಂದರು.ಕೆ.ಪಿ.ಎಸ್ ಶಾಲೆಗಳು: ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ತೆರೆಯಲಾಗುತ್ತಿದೆ. ಈ ಶಾಲೆಯಿಂದ ಶೈಕ್ಷಣಿಕ ಪ್ರಗತಿ ಮತ್ತಷ್ಟು ಆಗಲಿದೆ. ಹಾಸನ ಜಿಲ್ಲೆಗೆ 14 ಶಾಲೆಗಳನ್ನು ನೀಡಲು ನಿರ್ಧರಿಸಿದ್ದು, ಎಲ್ಲಾ ತಾಲೂಕುಗಳಿಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಉತ್ತಮ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಿಗುತ್ತಿದೆ. ಉತ್ತಮ ಶಿಕ್ಷಕರನ್ನು ಒಳಗೊಂಡ ಸಮೂಹವೇ ನಮ್ಮ ಶಾಲೆಗಳಲ್ಲಿದೆ. ಆದರೂ ಪೋಷಕರು ಮಾತ್ರ ಖಾಸಗಿ ಶಾಲೆಗಳ ವ್ಯಾಮೋಹ ಬಿಡುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಗಳ ಕಡೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ "ನಮ್ಮ ಶಾಲೆ ನಮ್ಮ ಜವಾಬ್ದಾರಿ " ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಈ ಕಾರ್ಯಕ್ರಮದಡಿ ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಗಳನ್ನ ತೆರೆಯಲಾಗುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಈಗಾಗಲೇ ಆರಂಭಿಸಲಾಗಿದೆ. ಆ ಭಾಗದಲ್ಲಿ 1800 ಶಾಲೆಗಳನ್ನು ತೆರೆಯಲಾಗಿದ್ದು, 41800 ಮಕ್ಕಳು ನೋಂದಣಿಯಾಗಿದ್ದಾರೆ. ಈ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲೂ ತೆರೆಯಲು ಚಿಂತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಸರ್ಕಾರಿ ಶಾಲೆಯ ಸಮಗ್ರ ಅಭಿವೃದ್ಧಿಯನ್ನ ಮಾಡಲಾಗುವುದು ಎಂದು ತಿಳಿಸಿದರು.ಶಾಸಕ ಎ.ಮಂಜು ಮಾತನಾಡಿ, ತಾಲೂಕಿನಲ್ಲಿ ತಾವು ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ತೆರೆದಿರುವ 12 ಮಕ್ಕಳ ಮನೆ ಪೂರ್ವ ಪ್ರಾಥಮಿಕ ಶಾಲೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಇದಕ್ಕೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸಹಕಾರ ಮುಖ್ಯವಾಗಿದೆ. ಸಚಿವರು ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದರು.
ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಹುಣಸೂರು ಬಾಲಕಿಯರ ಸರ್ಕಾರಿಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್. ಎನ್. ಗಿರೀಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ, ವರ್ಗಾವಣೆಗೊಂಡ ಶಿಕ್ಷಕರು ಹಾಗೂ ಉತ್ತಮ ಕ್ರೀಡಾತರಬೇತಿ ನೀಡಿದ ದೈಹಿಕ ಶಿಕ್ಷಕರನ್ನು ಗೌರವಿಸಲಾಯಿತು. ಇದೇ ವೇಳೆ ನವೀಕೃತ ಗುರುಭವನವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.ಪಪಂ ಅಧ್ಯಕ್ಷ ಎಸ್. ಎಸ್. ಪ್ರದೀಪ್ ಕುಮಾರ್, ತಹಶೀಲ್ದಾರ್ ಸೌಮ್ಯ, ಜಿಪಂ ಉಪಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕ ಮಹಾಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು, ಡಯಟ್ ಪ್ರಾಂಶುಪಾಲ ಜಿ. ರಂಗನಾಥಸ್ವಾಮಿ, ತಾಪಂ ಇಒ ಪ್ರಕಾಶ್, ಬಿಇಒ ಕೆ.ಪಿ. ನಾರಾಯಣ್, ಬಿಆರ್ ಸಿ ಸಿ.ಎಸ್. ಬಾಲರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ. ಎ. ರಂಗಸ್ವಾಮಿ, ಪಪಂ ಮುಖ್ಯಾಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾಂವಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಜಿಲ್ಲಾ ಪ್ರೌಢಶಾಲಾ ಸಂಘದ ಅಧ್ಯಕ್ಷ ಎಚ್.ಸಿ. ಬಸವರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಪಿ.ಶಿವಶಂಕರ್, ತಾಲೂಕು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಿ.ಸಿ.ಶಿವರಾಮೇಗೌಡ, ಸಹಶಿಕ್ಷಕರ ಸಂಘದ ಅಧ್ಯಕ್ಷ ಎನ್.ಡಿ. ಕಾಂತರಾಜ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸರಸ್ವತಿ, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್, ಎಸ್ ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ದೇವರಾಜ್, ಬಡ್ತಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅ ಧ್ಯಕ್ಷ ಎಸ್.ಬಿ.ವಿಜಯಕುಮಾರ್, ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ಎಚ್.ಪಿ. ಕುಮಾರ್, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಯೋಗರಾಜ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕುಳ್ಳಯ್ಯ, ಸಾವಿತ್ರಿ ಬಾಯಿಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಿ. ಪ್ರೇಮ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು. ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊಟ್ಟೆ ವಿತರಣೆ ಯೋಜನೆಗೆ ಸಚಿವರು ಚಾಲನೆ ನೀಡಿದರು. ಮಾತಿನ ಚಕಮಕಿ:ಶಿಕ್ಷಣ ಸಚಿವರಿಗೆ ಸ್ವಾಗತ ಕೋರಲು ಅನಕೃ ವೃತ್ತದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.