ಸಾರಾಂಶ
ಸಂಡೂರು: ತಾಲೂಕಿನಲ್ಲಿ ಹೆಚ್ಚಿನ ರೈತರು ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಅದಕ್ಕೆ ಬದಲಾಗಿ ಸಾವಯವ ಹಾಗೂ ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕಿ ಈ.ಅನ್ನಪೂರ್ಣ ತುಕಾರಾಂ ಅಭಿಪ್ರಾಯಪಟ್ಟರು.ಪಟ್ಟಣದ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದಿಂದಲೂ ಕೃಷಿಯೊಂದಿಗಿನ ತಮ್ಮ ಒಡನಾಟ ಕುರಿತು ಮೆಲುಕು ಹಾಕಿದ ಶಾಸಕರು, ಹುಟ್ಟಿನಿಂದ ಜೀವಿತಾವಧಿಯವರಗೆ ನಮ್ಮನ್ನು ಪೋಷಿಸುವವಳು ಭೂಮಿ ತಾಯಿ. ಹೀಗಾಗಿ ನಾವು ಭೂಮಿ ತಾಯಿಯ ಬಗ್ಗೆ ಗೌರವ ಹಾಗೂ ಕಾಳಜಿ ವಹಿಸಬೇಕು. ಮಕ್ಕಳಲ್ಲಿಯೂ ಕೃಷಿಯ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು ಎಂದರು.ಇಂದು ರೈತರಿಗೆ ತಾವು ಬೆಳೆದ ಬೆಳೆಗೆ ದರ ನಿಗದಿ ಮಾಡುವ ಅಧಿಕಾರವಿಲ್ಲದಂತಾಗಿದೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಇಂದು ಹೆಚ್ಚಿನ ಜನತೆ ಸಾವಯವ ಉತ್ಪನ್ನಗಳಿಗೆ ಮಾರುಹೋಗುತ್ತಿದ್ದಾರೆ. ರೈತರು ಸಾವಯವ ಉತ್ಪನ್ನಗಳನ್ನು ತಯಾರಿಸಿದಲ್ಲಿ, ಅವುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸಂಸದ ಈ. ತುಕಾರಾಂ ತಾಲೂಕಿನಲ್ಲಿಯ ಯಶವಂತನಗರದಿಂದ ಸ್ವಾಮಿಹಳ್ಳಿಯವರೆಗಿನ ರೈಲು ಮಾರ್ಗವನ್ನು ವಿಸ್ತರಿಸಿ, ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಿದ್ದಾರೆ. ಈ ಯೋಜನೆ ಕಾರ್ಯಗತವಾದರೆ, ಈ ಭಾಗದ ರೈತರು ತಮ್ಮ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗಲಿದೆ. ರೈತರು ತಾವು ಎದುರಿಸುತ್ತಿರುವ ಕುಂದು ಕೊರತೆಗಳ ಕುರಿತು ತಿಳಿಸಿದಲ್ಲಿ, ಅವುಗಳ ನಿವಾರಣೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತ ದುರ್ಗಪ್ಪ ಸಾವಯವ ಕೃಷಿ, ಅದರಿಂದ ಆಗುವ ಉಪಯೋಗಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಆತ್ಮ ಯೋಜನೆ ಅಡಿಯಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ತಾಳೂರಿನ ಕೆರೆ ತಿಪ್ಪೇಸ್ವಾಮಿ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಭುಜಂಗನಗರದ ಬಸಪ್ಪ ಕೆರೆನಳ್ಳಿ, ನರಸಿಂಗಾಪುರದ ಶಿವಕುಮಾರ್, ತಾಳೂರಿನ ಮಲ್ಲೇಶಪ್ಪ, ಸ್ವಾಮಿಹಳ್ಳಿಯ ಸುಶೀಲಮ್ಮ, ಓಬಳಾಪುರದ ಶಿವಗಂಗಮ್ಮ, ಗೌರಿಪುರದ ಜಿ. ತಿಪ್ಪೇಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕೃಷಿ ಕುರಿತು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕೃಷಿ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಸಹಾಯಕ ಕೃಷಿ ನಿರ್ದೇಶಕ ಸಿ.ಎಂ. ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಕೆ. ರಾಘವೇಂದ್ರ, ಅಧೀಕ್ಷಕ ವೈ.ಎನ್.ಶಿಂಧೆ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ. ಜಾಫರ್‌ಸಾಬ್, ಉಪಾಧ್ಯಕ್ಷ ಮರಿಚಿತ್ತಪ್ಪ, ಖಜಾಂಚಿ ಚಿತ್ತಪ್ಪ, ಜಿಲ್ಲಾ ಪ್ರತಿನಿಧಿ ಎಸ್.ಕೆ. ವಿಶಾಲಾಕ್ಷಿ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು. ಶ್ರೀಧರ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.ಸಂಡೂರಿನ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಲಾಯಿತು.