ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿವಿಧ ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು.

ಸಭೆಯಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಮಕ್ಕಳ ಸಹಾಯವಾಣಿಗೆ ಬಂದ ನಾಲ್ಕು ಕರೆಗಳಲ್ಲಿ ಮೂರು ಸುಳ್ಳು ಕರೆಗಳಾಗಿವೆ. ಒಂದು ಪ್ರಕರಣದಲ್ಲಿ ಬಾಲ್ಯವಿವಾಹವನ್ನು ತಡೆಗಟ್ಟಲಾಗಿದೆ. ಜೊತೆಗೆ ಮೂರು ಪೋಕ್ಸೊ ಪ್ರಕರಣಗಳು ದಾಖಲಾಗಿರುವುದಾಗಿ ಹೇಳಿದರು.

ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಪೊಕ್ಸೋ ಕಾಯ್ದೆ ಕುರಿತು ತರಬೇತಿ ನೀಡುವುದು ಕಡ್ಡಾಯವಾಗಿದೆ. ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಪಡೆಯುವಂತೆ ಸೂಚಿಸಲಾಗಿದೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಏಳು ದಿನಗಳಿಗಿಂತ ಹೆಚ್ಚು ಕಾಲ ಶಾಲೆಗೆ ಗೈರಾಗಿರುವ ಮಕ್ಕಳ ಪಟ್ಟಿಯನ್ನು ಪಿಡಿಒಗಳಿಗೆ ನೀಡುವಂತೆ ಸೂಚಿಸಲಾಗಿದೆ. ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆ ಕುರಿತು ನಿರಂತರ ನಿಗಾ ಇರಬೇಕೆಂದು ತಿಳಿಸಿದರು.

ಅಪ್ರಾಪ್ತೆ ಗರ್ಭಿಣಿ ವಿಚಾರ:


ಸಭೆಯಲ್ಲಿ ಮತ್ತೊಂದು ಗಂಭೀರ ವಿಷಯ ಚರ್ಚೆಗೆ ಬಂದಿದ್ದು, ತಾಲೂಕಿನ ಒಬ್ಬ ಅಪ್ರಾಪ್ತೆಯು ಬೇರೆ ತಾಲೂಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೇಳೆ ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಆಕೆಯ ಪೋಷಕರು ವಿಳಾಸ ಬದಲಿಸಿದ್ದು, ಪ್ರಸ್ತುತ ಬಾಲಕಿಯ ಆರೋಗ್ಯ ಸ್ಥಿತಿ ತಿಳಿಯಲು ಆಕೆಯ ಹೊಸ ವಿಳಾಸ ಪತ್ತೆ ಮಾಡುವ ಕುರಿತು ಅಧಿಕಾರಿಗಳು ಚರ್ಚಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಜಿಲ್ಲಾ ಮಟ್ಟದ ಸಂಯೋಜಕಿ ಸೀತಾಮಹಾಲಕ್ಷ್ಮಿ, ತಾಲೂಕು ಸಂಯೋಜಕ ಕರಿಸ್ವಾಮಿ, ಮಕ್ಕಳ ಹಕ್ಕುಗಳ ನಿಗಾ ಘಟಕದ ಸದಸ್ಯ ಎಚ್.ಸಿ. ರಾಘವೇಂದ್ರ, ಸಂಯೋಜಕಿ ಲಕ್ಷ್ಮಿ, ಮಕ್ಕಳ ಸಹಾಯವಾಣಿ ಸಂಯೋಜಕ ಕೆ.ಆನಂದ, ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಂ, ಇಸಿಒ ಎಂ. ರೇವಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.