ಸಾರಾಂಶ
ಮುಂದಿನ ದಿನಗಳಲ್ಲಿ ಗುಣಮಟ್ಟದ ಕಾಫಿಗೆ ಮಾತ್ರ ಉತ್ತಮ ಬೆಲೆ ಸಿಗಲಿದೆ. ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಎಂ. ಜೆ. ದಿನೇಶ್ ಹೇಳಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮುಂದಿನ ದಿನಗಳಲ್ಲಿ ಗುಣಮಟ್ಟದ ಕಾಫಿಗೆ ಮಾತ್ರ ಉತ್ತಮ ಬೆಲೆ ಸಿಗಲಿದೆ. ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಜೆ.ದಿನೇಶ್ ಅವರು ಹೇಳಿದರು.ತಾಲೂಕಿನ ತಾಕೇರಿ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮದ ಕಾಫಿ ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಬೇಡಿಕೆ ಮೇಲೆ ಕಾಫಿ ಬೆಲೆ ನಿರ್ಧಾರವಾಗುತ್ತದೆ. ಗುಣಮಟ್ಟದ ಕಾಫಿಯನ್ನು ಮಾತ್ರ ಹೊರ ದೇಶಗಳು ಆಮದು ಮಾಡಿಕೊಳ್ಳುತ್ತವೆ. ಈ ಕಾರಣದಿಂದ ಕಾಫಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಬೆಳೆಗಾರರ ಮೇಲಿದೆ ಎಂದು ಹೇಳಿದರು. ಅಕಾಲಿಕ ಮಳೆಯಿಂದ ಅರೇಬಿಕ ಕಾಫಿ ಉತ್ಪಾದನೆ ಸವಾಲಿನ ಕೆಲಸವಾಗಿದೆ. ಈ ಹಿಂದೆ ಕಾಫಿ ಹಿಂದೆ ವ್ಯಾಪಾರಸ್ಥರ ಹಿಡಿತದಲ್ಲಿತ್ತು. ಇಂದು ಹವಾಮಾನದ ಹಿಡಿತದಲ್ಲಿದೆ. ಕಾಫಿ ಉತ್ಪಾದನೆ ವಿಶ್ವದಾದ್ಯಂತ ಕಡಿಮೆಯಾಗುತ್ತಿದೆ. ಗುಣಮಟ್ಟವನ್ನು ಮಾತ್ರ ಬೆಳೆಗಾರರು ಮರೆಯಬಾರದು. ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ಇರುವ ಸವಲತ್ತುಗಳು ಹಾಗೂ ವೈಜ್ಞಾನಿಕ ಮಾದರಿಯಲ್ಲಿ ಕಾಫಿ ಕೃಷಿ ಮಾಡುವ ವಿಧಾನ ಹಾಗೂ ಕಾಲಕಾಲಕ್ಕೆ ಔಷಧಿಗಳ ಸಿಂಪಡಣೆ ಸೇರಿದಂತೆ ಇನ್ನಿತರೆ ಉಪಯುಕ್ತ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ಡಾ.ಚಂದ್ರಶೇಖರ್, ಹಿರಿಯ ಸಂಪರ್ಕಾಧಿಕಾರಿ ಡಾ. ರಂಜಿತ್ ಕುಮಾರ್, ತಾಕೇರಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್, ಕಾಫಿ ಬೆಳೆಗಾರರಾದ ಎ.ಆರ್.ಮುತ್ತಣ್ಣ, ಎಂ.ಪಿ.ಮುತ್ತಣ್ಣ ಇದ್ದರು.