ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ, ವಿದ್ಯೆ ಎನ್ನುವುದು ಯಾರು ಕದಿಯಲಾಗದ ಆಸ್ತಿ ಹಾಗಾಗಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ರೂಪಿಸಬೇಕು

ಹರಪನಹಳ್ಳಿ: ಸರ್ಕಾರಿ ಶಾಲೆಗಳ ಬಲಲವರ್ದನೆಗೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಪೋಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಹೇಳಿದರು.

ನಗರದ ಕುರುಬರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ದಾಖಲಾತಿ ಹೆಚ್ಚಳಕ್ಕಾಗಿ 1ನೇ ತರಗತಿ ಮಕ್ಕಳಿಗೆ ದಾನಿಗಳ ಸಹಕಾರದಿಂದ ಪಡೆದ ತಲಾ ಒಂದು ಸಾವಿರ ಮೌಲ್ಯದ ಎಫ್.ಡಿ ಬಾಂಡ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ, ವಿದ್ಯೆ ಎನ್ನುವುದು ಯಾರು ಕದಿಯಲಾಗದ ಆಸ್ತಿ ಹಾಗಾಗಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರೆ ಹೆಚ್ಚು ಆದರೆ ಇಂದು ಖಾಸಗಿ ಶಾಲೆಗಳಿಗೆ ಸಮಾನಾಂತರವಾಗಿ ಸರ್ಕಾರಿ ಶಾಲೆಗಳು ಬೆಳೆದಿವೆ, ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಕುರುಬರಗೇರಿಯ ಶಾಲೆಯ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಳಕ್ಕಾಗಿ ಕೈಗೊಂಡಿರುವ ವಿಶೇಷ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸಿಪಿಐ ಮಹಾಂತೇಶ ಜಿ.ಸಜ್ಜನ್ ಮಾತನಾಡಿ, ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ, ಅನ್ನ, ಅಕ್ಷರ, ಕೊಡುವ ಏಕೈಕ ಶಾಲೆಗಳೆಂದರೆ ಎಂದರೆ ಅದು ಸರ್ಕಾರಿ ಶಾಲೆಗಳು ಮಾತ್ರ ಎಂದು ನುಡಿದರು.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೆಶಕ ನಾಗರಾಜ ಮಾತನಾಡಿ, ಮಕ್ಕಳ ದಾಖಲಾತಿಗಾಗಿ ಕೈಗೊಂಡಿರುವ ಈ ವಿಶೇಷ ಕಾರ್ಯಕ್ರಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದರು.

ಹಿರಿಯ ಪತ್ರಕರ್ತ ಬಿ.ರಾಮಪ್ರಸಾದ ಗಾಂಧಿ ಮಾತನಾಡಿ, ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳ ಜತೆಗೆ ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖ್ಯ ಎಂದರು.

ಮುಖಂಡ ಎಚ್. ವಸಂತಪ್ಪ, ಬಿಕ್ಕಿಕಟ್ಟಿ ತಿಮ್ಮಣ್ಣ, ಕುಂಚೂರು ಹಾಲಪ್ಪ ಮಾತನಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ರಂಗಣ್ಣನವರ್, ಸಿಆರ್‌ ಪಿ ಶಿವರಾಯಚಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ತಳವರಾರ ಚಂದ್ರಪ್ಪ, ಶಿಕ್ಷಕರಾದ ಸಾವಿತ್ರಮ್ಮ,ಮಂಗಳಗೌರಮ್ಮ, ರತ್ನಿಬಾಯಿ, ಅತಿಥಿ ಶಿಕ್ಷಕ ಧನರಾಜ ನಾಯ್ಕ, ಪೋಷಕರು ಇದ್ದರು.