ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಒತ್ತು, ಡಿಜಿಟಲ್ ಲೈಬ್ರರಿ ಆರಂಭ: ಶಾಸಕ ಪಿ.ಎಂ.ನರೇಂದರಸ್ವಾಮಿ

| Published : Sep 07 2025, 01:00 AM IST

ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಒತ್ತು, ಡಿಜಿಟಲ್ ಲೈಬ್ರರಿ ಆರಂಭ: ಶಾಸಕ ಪಿ.ಎಂ.ನರೇಂದರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡುವ ಮೂಲಕ ದೇಶದ ಭವಿಷ್ಯ ನಾಯಕರನ್ನು ಸೃಷ್ಟಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಒತ್ತು ನೀಡುವ ಜೊತೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿಜಿಟಲ್ ಲೈಬ್ರರಿ ಆರಂಭಿಸಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳನ್ನು ಡಿಜಿಟಲೀಕರಣಗೊಳಿಸಿ ಕ್ಲಸ್ಟರ್ ಮಟ್ಟದಲ್ಲಿ ಮಲ್ಟಿಮೀಡಿಯಾ ಸೆಂಟರ್ ಸ್ಥಾಪಿಸಿ, ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಕ್ರಮ ವಹಿಸಲಾಗುವುದು. ಅತಿಥಿ ಶಿಕ್ಷಕರ ನೇಮಕಾತಿ ಮಾಡಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು.

ಸೌಲಭ್ಯಗಳನ್ನು ಬಳಸಿಕೊಂಡು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಕೊಡುಗೆ ನೀಡಬೇಕು. ಹಿಂದುಳಿದ ವರ್ಗದವರಿಗೆ ಮೊದಲ ಬಾರಿಗೆ ಶಿಕ್ಷಣ ನೀಡಿದ್ದ ತಲಕಾಡು ರಂಗೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಸಲಹೆ ನೀಡಿದ ಅವರು, ಶಿಕ್ಷಣದ ಮೂಲಕ ಉತ್ತಮ ಪ್ರಜೆಗಳ ರೂಪಿಸಿ ದೇಶದ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಸಾಕಷ್ಟಿದೆ ಎಂದು ಬಣ್ಣಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿ ಉಂಟಾಗುತ್ತಿದೆ. ಶಾಸಕರ ಇಚ್ಛಾಶಕ್ತಿಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಆಧುನಿಕತೆಗೆ ತಕ್ಕಂತೆ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟಿರುವ ಶಾಸಕರಿಗೆ ಶಿಕ್ಷಣ ಇಲಾಖೆ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕೊಳ್ಳೇಗಾಲ ಜೀತವನ ಬುದ್ಧ ವಿಹಾರದ ಮನೋ ರಕ್ಕಿತ ಬಂತೇಜಿ ಮಾತನಾಡಿ, ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡುವ ಮೂಲಕ ದೇಶದ ಭವಿಷ್ಯ ನಾಯಕರನ್ನು ಸೃಷ್ಟಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರ ವೃತ್ತಿ ಪವಿತ್ರ. ಪಠ್ಯ ಪುಸ್ತಕದ ವಿಷಯಗಳನ್ನು ಕಲಿಸುವುದರ ಜೊತೆಗೆ ಮಾನವೀಯ ಮೌಲ್ಯದ ಶಿಕ್ಷಣವನ್ನು ನೀಡಬೇಕೆಂದು ಸಲಹೆ ನೀಡಿದರು.

ಇದೇ ವೇಳೆ ನಿವೃತ್ತರಾದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ಸಾರ್ವಜನಿಕ ಸಹಕಾರದೊಂದಿಗೆ ಅಭಿವೃದ್ಧಿ ಹೊಂದಿದ್ದ ಶಾಲೆಗಳ ಶಿಕ್ಷಕರು, ಹಲವು ಶಿಕ್ಷಕರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ, ಉತ್ತಮ ಅಡುಗೆ ಸಿಬ್ಬಂದಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎ.ಲೋಕೇಶ್, ಡಯಟ್(ಅಭಿವೃದ್ಧಿ) ಉಪನಿರ್ದೇಶಕ ಕೆ.ಯೋಗೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಪುರಸಭೆ ಸದಸ್ಯ ನೂರುಲ್ಲಾ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಪ್ರಮುಖರಾದ ಪಿ.ಮಾದೇಶ್, ಎಚ್.ನಾಗೇಶ್, ಟಿ.ಸಿ.ಚೌಡಯ್ಯ, ಮಲ್ಲಿಕಾರ್ಜುನಯ್ಯ, ಡಾ.ಚಂದ್ರಶೇಖರ್ ದಡದಪುರ, ರಾಮಲಿಂಗಯ್ಯ, ಶಿವಕುಮಾರ್, ಸಿದ್ದೇಗೌಡ, ಪುಟ್ಟರಾಜಯ್ಯ, ಪುಟ್ಟಸ್ವಾಮಿ, ಚಂದ್ರಶೇಖರ್, ರವೀಂದ್ರ, ನಾಗರಾಜು, ನಿಂಗರಾಜು, ಉದಯ್ ಕುಮಾರ್, ಗುರುಸ್ವಾಮಿ, ಮಹೇಶ್ ಪಾಲ್ಗೊಂಡಿದ್ದರು.