ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ನಮ್ಮ ಸರ್ಕಾರ ಪ್ರತಿವರ್ಷ ₹5 ಸಾವಿರ ಕೋಟಿ ಅನುದಾನ ನೀಡುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಹೇಳಿದರು.ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾದ ಮೇಲೆ ಅಕ್ಷರ ಆವಿಷ್ಕಾರ, ಉದ್ಯೋಗ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಸೇರಿದಂತೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಶೇ. 25 ಹಣವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ ಎಂದರು.
ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಹಾಗೂ ಅತೀ ಹಿಂದುಳಿದ ತಾಲೂಕುಗಳಲ್ಲಿ ನಮ್ಮ ಭಾಗದ 21 ತಾಲೂಕುಗಳು ಸೇರಿವೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 41 ತಾಲೂಕುಗಳಿದ್ದು, ಇವುಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ₹45 ಕೋಟಿ ವೆಚ್ಚದಲ್ಲಿ 112 ಬಸ್‌ಗಳನ್ನು ಖರೀದಿಸುತ್ತಿದ್ದೇವೆ. ನಮ್ಮ ಭಾಗದಲ್ಲಿ 2618 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.ಕಳೆದ 10 ವರ್ಷಗಳಲ್ಲಿ ಕೆಕೆಆರ್‌ಡಿಬಿಯಿಂದ ಕೊಪ್ಪಳ ಜಿಲ್ಲೆಯ ಒಟ್ಟು 4718 ಕಾಮಗಾರಿಗಳಲ್ಲಿ 3769 ಕಾಮಗಾರಿಗಳು ಪೂರ್ಣಗೊಂಡಿದ್ದು, 864 ಕಾಮಗಾರಿಗಳು ಪ್ರಗತಿಯಲ್ಲಿವೆ. 2024- 25ನೇ ಸಾಲಿಗೆ ಕೊಪ್ಪಳ ಜಿಲ್ಲೆಯ 5 ತಾಲೂಕುಗಳಿಗೆ ₹238 ಕೋಟಿಯನ್ನು ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆ ಅಡಿಯಲ್ಲಿ ನೀಡಲಾಗಿದೆ ಎಂದರು.
2012ರಲ್ಲಿ ಮನಮೋಹನ ಸಿಂಗ್ ಪ್ರಧಾನ ಮಂತ್ರಿ ಆಗಿದ್ದಾಗ ನಮ್ಮ ಭಾಗದ ಬಹುದಿನಗಳ ಬೇಡಿಕೆ ಕಲಂ 371 ಜೆ ಜಾರಿ ಆಯಿತು. ಈ ಭಾಗದ ಜನರ ಹಲವಾರು ವರ್ಷಗಳ ಹೋರಾಟ ಮತ್ತು ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರ ವಿಶೇಷ ಪ್ರಯತ್ನದಿಂದಾಗಿ 371 ಜೆ ಜಾರಿ ಆಯಿತು. ಇದರಿಂದ ನಮ್ಮ ಭಾಗದ ಜನರಿಗೆ ಹಲವಾರು ಸೌಲಭ್ಯಗಳು ಸಿಗುತ್ತಿವೆ ಎಂದು ಹೇಳಿದರು.ನಿನ್ನೆ ಅಧಿಕಾರಿಗಳ ಜತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭೆ ಮಾಡಲಾಗಿದ್ದು, ಕೆಕೆಆರ್‌ಡಿಬಿಯಿಂದ ನಡೆಯುತ್ತಿರುವ ರಸ್ತೆ, ವಸತಿ ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ರಂಗಮಂದಿರ ಸೇರಿ ಇತರೆ ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಹಲವಾರು ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಸಿಇಒ ರಾಹುಲ್ ರತ್ನಂ ಪಾಂಡೆ ಸೇರಿದಂತೆ ಇತರರಿದ್ದರು.ವಿವಿಧ ಕಾಮಗಾರಿಗಳ ಪರಿಶೀಲನೆ:
ಪತ್ರಿಕಾಗೋಷ್ಠಿಯ ನಂತರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದರು.