ಸಾರಾಂಶ
ಹಾವೇರಿ: ಭಾರತದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಮ್ಮ ಸರ್ಕಾರ ಸರ್ವರನ್ನೂ ಒಳಗೊಂಡ, ಸರ್ವರನ್ನು ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡಬೇಕೆಂಬ ಪ್ರಾಮಾಣಿಕ ಆಶಯದ ಸರ್ಕಾರವಾಗಿ ಬಡವರ, ದಮನಿತರ, ಶೋಷಿತರ ಏಳಿಗೆಗಾಗಿ ವಿಶೇಷ ಒತ್ತು ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯಗಳು ಸಾಕಾರಗೊಳ್ಳಬೇಕು, ಈ ದೇಶದ ಸಾರ್ವಭೌಮನಾದ ಜನ ಸಾಮಾನ್ಯನ ಬದುಕು ಸುಂದರವಾಗಬೇಕು. ಭಾರತದ ಪ್ರಜೆಗಳಾದ ನಾವು ನಮ್ಮ ಸಂವಿಧಾನವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ. ರಾಷ್ಟ್ರದ ಎಲ್ಲ ಪ್ರಜೆಗಳಿಗೂ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ರಾಜಕೀಯ ನ್ಯಾಯ ದೊರಕಿಸಿಕೊಡುವುದೇ ನಮ್ಮ ಸಂವಿಧಾನದ ಮುಖ್ಯ ಗುರಿಯಾಗಿದೆ. ನಮ್ಮ ಸಂವಿಧಾನ ನಮಗೆ ಅಪರಿಮಿತ ಹಕ್ಕುಗಳನ್ನು ಕೊಟ್ಟಿರುವಂತೆ, ಕರ್ತವ್ಯಗಳನ್ನೂ ಸೂಚಿಸಿದೆ. ನಮ್ಮ ಸಂವಿಧಾನದ ನಿರ್ದೇಶಕ ಸೂತ್ರಗಳು, ಭಾರತೀಯರಾದ ನಾವು ಎಂಥ ದೇಶವನ್ನು ರೂಪುಗೊಳಿಸಬೇಕು ಎಂಬ ಕನಸುಗಳನ್ನು ನೀಡಿದೆ. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪವಂತಾಗಬೇಕು ಎಂದರು.ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮನಾಗಿ ಎಲ್ಲರಿಗೂ ಹಂಚಿಕೆಯಾಗಬೇಕು ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಾವು ಜನತೆಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಚಿತ ಸಾರಿಗೆ ಪ್ರಯಾಣದ ಶಕ್ತಿಯೋಜನೆಯಡಿ ಜಿಲ್ಲೆಯಲ್ಲಿ ಈ ವರೆಗೆ ₹9.54 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಾವೇರಿ ವಿಭಾಗಕ್ಕೆ 86 ಹೊಸ ಬಸ್‌ಗಳನ್ನು ನೀಡಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ 414 ಮನೆ ಹಾಗೂ 31,070 ಹೆಕ್ಷೇರ್ ಬೆಳೆಹಾನಿಯಾದ ಸಂತ್ರಸ್ತರಿಗೆ ₹23.47 ಕೋಟಿ ಪರಿಹಾರ ಪಾವತಿಸಲಾಗಿದೆ. ಬೇಸಿಗೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ 7.45 ಲಕ್ಷ ಟನ್ ಮೇವು ಲಭ್ಯವಿದೆ. ಮುಂದಿನ 46 ವಾರಗಳ ವರೆಗೆ ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆ ಇಲ್ಲ. ಪ್ರಕೃತಿ ವಿಕೋಪದಿಂದ ಮೃತಪಟ್ಟ 98 ಜಾನುವಾರುಗಳ ಮಾಲೀಕರಿಗೆ ₹ 2.20 ಲಕ್ಷ ಪರಿಹಾರ ಮೊತ್ತ ಪಾವತಿಸಲಾಗಿದೆ. 11.32 ಲಕ್ಷ ಜಾನುವಾರುಗಳಿಗೆ ವಿವಿಧ ಲಸಿಕೆ ನೀಡಲಾಗಿದೆ ಎಂದರು.ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 726 ಕಾಮಗಾರಿಗಳನ್ನು ಆರಂಭಿಸಿ, ಈಗಾಗಲೇ 649 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ 77 ಕಾಮಗಾರಿಗಳನ್ನು ಮಾರ್ಚ್ ಒಳಗಾಗಿ ಪೂರ್ಣಗೊಳಿಸಿ ಜಿಲ್ಲೆಯ ಎಲ್ಲ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು.
ಸನ್ಮಾನ: ಮಾಧ್ಯಮ ಕ್ಷೇತ್ರದಿಂದ ತೇಜಸ್ವಿನಿ ಕಾಶೆಟ್ಟಿ, ಪ್ರಶಾಂತ ಮರೆಮ್ಮನವರ ಹಾಗೂ ಕ್ರೀಡೆ, ಶಿಕ್ಷಣ, ಸಾಮಾಜಿಕ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 18 ಸಾಧಕರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಸಶಸ್ತ್ರ ಮೀಸಲು ಪಡೆ, ನಾಗರಿಕ ಸೇವಾ, ಅಗ್ನಿಶಾಮಕ, ಅಬಕಾರಿ ದಳ, ಅರಣ್ಯ ರಕ್ಷಕ ದಳ, ಹೋಮ್ ಗಾರ್ಡ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ವಿವಿಧ 14 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು.ಮಕ್ಕಳಿಂದ ನೃತ್ಯ: ವಿವಿಧ ಶಾಲಾ ಮಕ್ಕಳು ವಂದೇ ಮಾತರಂ, ದೇಶ ಮೇರಾ ರಂಗೀಲಾ ಸೇರಿದಂತೆ ವಿವಿಧ ದೇಶ ಭಕ್ತಿಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಮೈದೂರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ನಾಗಾರಜ ಎಲ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಉಪ ವಿಭಾಗಾಧಿಕಾರಿ ಚನ್ನಪ್ಪ ಇತರರು ಇದ್ದರು.