ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದೊಂದಿಗೆ ಕೃಷಿಕರಿಗೆ ನೆರವಾಗಲು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಬೇಕೆಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಬಿಜೆಪಿ ಹುರಿಯಾಳು ಗೋವಿಂದ ಕಾರಜೋಳ ಅವರಿಗೆ ಕಿವಿ ಮಾತು ಹೇಳಿದರು.ತಮ್ಮ ಗೆಲುವಿನ ನಂತರ ಸಿರಿಗೆರೆಯಲ್ಲಿ ಸದ್ಧರ್ಮ ನ್ಯಾಯಪೀಠಕ್ಕೆ ಆಗಮಿಸಿದ ಗೋವಿಂದ ಕಾರಜೋಳ ತರಳಬಾಳು ಶ್ರೀಗಳನ್ನು ಅಭಿನಂದಿಸಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ಶ್ರೀಗಳು ಮಾತನಾಡಿದರು.
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಜಗಳೂರು ಮತ್ತು ಭರಮಸಾಗರ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಗೋವಿಂದ ಕಾರಜೋಳ ನೆರವಾದುದನ್ನು ಶ್ರೀಗಳು ನೆನಪು ಮಾಡಿಕೊಂಡರು. ಕ್ಷೇತ್ರದ ಮತದಾರರು ನನ್ನಲ್ಲಿ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಕ್ಷೇತ್ರದ ತುಂಬ ಇರುವ ಕಾರ್ಯ ಕರ್ತರು, ಪಕ್ಷದ ಹಿರಿಯರು, ಮಾರ್ಗದರ್ಶನಗಳಿಂದ ಗೆಲುವು ನನಗೆ ದೊರೆತಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಾನು ಋಣಿಯಾಗಿರುವೆ ಎಂದು ಕಾರಜೋಳ ಹೇಳಿದರು.ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ತರುವ ಮೂಲಕ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಾನು ಬದ್ಧವಾಗಿ ಕೆಲಸ ಮಾಡುವೆ. ಕ್ಷೇತ್ರದ ಜನರು ಪಕ್ಷ ಮತ್ತು ನನ್ನ ಮೇಲೆ ಇರಿಸಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆಂದರು.
ಶ್ರೀಗಳ ಭೇಟಿಗೂ ಮುನ್ನ ತರಳಬಾಳು ಮಠದ ಆವರಣದಲ್ಲಿನ ಐಕ್ಯಮಂಟಪಕ್ಕೆ ತೆರಳಿ ಶಿವಕುಮಾರ ಶ್ರೀಗಳ ಪ್ರತಿಮೆಗೆ ಗೌರವ ಸಲ್ಲಿಸಿದರು. ಫಲಿತಾಂಶ ಹೊರಬೀಳುತ್ತಿ ದ್ದಂತೆ ಸಿರಿಗೆರೆಯ ಕಾರ್ಯಕರ್ತರು ಕೆನರಾ ಬ್ಯಾಂಕ್ ವೃತ್ತದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಯುವ ಮೋರ್ಚಾ ಉಪಾಧ್ಯಕ್ಷ, ಕೆ.ಬಿ.ಮೋಹನ್, ಕಾರ್ಯದರ್ಶಿ ಸಂದೀಪ್ ಹಂಚಿನಮನೆ, ಪೆಟ್ರೋಲ್ ಬಸವರಾಜ್, ಜಿ.ಎಂ.ಬಸವರಾಜ್, ಸಿದ್ಧಲಿಂಗಮೂರ್ತಿ, ಹಳವುದರ ತಿಪ್ಪೇಸ್ವಾಮಿ ಮತ್ತು ನೂರಾರು ಸಂಖ್ಯೆಯ ಕಾರ್ಯಕರ್ತರಿದ್ದರು.ಸಾಣೇಹಳ್ಳಿ ಶ್ರೀಮಠಕ್ಕೂ ಕಾರಜೋಳ ಭೇಟಿ
ಹೊಸದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಾಗಿ ಆಯ್ಕೆಯಾದ ಶ್ರೀ ಗೋವಿಂದ ಎಂ. ಕಾರಜೋಳ ಸಾಣೇಹಳ್ಳಿ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಪಂಡಿತಾರಾಧ್ಯ ಸ್ವಾಮೀಜಿ ನೂತನ ಸಂಸದರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನಕೊಡಬೇಕು. ಭ್ರಷ್ಟಾಚಾರ ರಹಿತ ಆಡಳಿತ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.ಜನಪ್ರತಿನಿಧಿಗಳು ದೇವಸ್ಥಾನಕ್ಕೆ ಅನುದಾನ ಕೇಳದೇ ನೀರಾವರಿ, ಶಾಲೆ, ಸಮುದಾಯ ಭವನ, ರಸ್ತೆ ಇಂತಹ ಸಮಾಜಾಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸಿ ಸೂಚಿಸಿದ ಶ್ರೀಗಳು ಚಿತ್ರದುರ್ಗ ಜಿಲ್ಲೆ ತುಂಬ ಹಿಂದುಳಿದ ಪ್ರದೇಶ. ನೀರಾವರಿ ಯೋಜನೆಗೆ ಹೆಚ್ಚು ಒತ್ತು ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕು ತಿಳಿಸಿದರು.
ನೂತನ ಸಂಸದ ಗೋವಿಂದ ಕಾರಜೋಳ ಮಾತನಾಡಿ, ನನ್ನ ಮುಖ ಪರಿಚಯವಿಲ್ಲದಿದ್ದರೂ ಒಳ್ಳೆಯ ಬಹುಮತದಿಂದ ನನ್ನನ್ನು ಗೆಲ್ಲಿಸಿದ್ದೀರಿ ಆದ್ದರಿಂದ ಒಳ್ಳೆಯ ಕೆಲಸ ಮಾಡುವೆ. ಚಿತ್ರದುರ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ಮತದಾರರ ಋಣವನ್ನು ತೀರಿಸುವೆ ಎಂದರು