ಹನುಮಸಾಗರ: ಗ್ರಾಮೀಣ ಭಾಗದ ಅನೇಕ ಸಾಂಪ್ರದಾಯಿಕ ಕಲೆ ಇಂದು ನಶಿಸುವ ಹಂತಕ್ಕೆ ತಲುಪಿದ್ದು, ಇಂತಹ ಕಲೆ ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸಲು ಸಂಘ-ಸಂಸ್ಥೆ ನಿರಂತರ ಕಾರ್ಯಕ್ರಮ ಆಯೋಜಿಸಬೇಕಾಗಿದೆ ಎಂದು ಮಾಜಿ ಗ್ರಾಪಂ ಉಪಾಧ್ಯಕ್ಷ ಪ್ಯಾಟೆಪ್ಪ ಸೂಡಿ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಶ್ರೀಪುಟ್ಟರಾಜ ಸಂಗೀತ ಕಲಾ ಸಂಸ್ಥೆ ಹಿರೇಮನ್ನಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಂಗೀತ ಕಲಾ ವೈಭವ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಚಾಕ್ಷರಿ ಅಜ್ಜನವರು ಆಶೀರ್ವಚನ ನೀಡಿ ಗುರು ಪಂಡಿತ ಪುಟ್ಟರಾಜ ಗವಾಯಿಗಳು ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಭಿಕ್ಷಾಪಾತ್ರೆಯ ಬದಲಾಗಿ ಅಕ್ಷಯಪಾತ್ರೆ ನೀಡಿ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ದಾರಿದೀಪರಾಗಿದ್ದಾರೆ ಎಂದರು.

ನಿಸರ್ಗ ಸಂಗೀತ ಪಾಠಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಂಚಿನಾಳದ ಯುವರಾಜ್ ಎಸ್.ಹಿರೇಮಠ ಹಾಗೂ ತಂಡದಿಂದ ಸುಗಮ ಸಂಗೀತ, ಸೇಬಿನಕಟ್ಟಿಯ ಜ್ಞಾನಪ್ಪ ತಳವಾರ್ ತಂಡದಿಂದ ಜನಪದ ಗೀತೆ, ಮರಿಸ್ವಾಮಿ ಗುಡಗಲದಿನ್ನಿ ಅವರಿಂದ ತತ್ವಪದ, ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿ ತಂಡದಿಂದ ಭಜನಾ ಪದ ಹಾಗೂ ವೆಂಕಟೇಶ ಹೊಸಮನಿ ಮತ್ತು ದೇವಪ್ಪ ದೇಗುಂಟಿ ಅವರಿಂದ ಜನಪದ ಗೀತೆಗಳ ಗಾಯನ ನಡೆಯಿತು.


ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುರು ಬಸವನಗೌಡ ಮಾಲಿಪಾಟೀಲ, ಹನುಮೇಶ್ ದಿವಾನ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಕಜ್ಜಿ, ಬಸವರಾಜ ಕಾಳಿ, ಹನುಮೇಶ ಲೈನದ, ಕೀಬೋರ್ಡ್ ವಾದಕ ವಿನೋದ ಪಾಟೀಲ, ತಬಲಾ ವಾದಕ ಕಿರಣ್ ಬಸುದೆ, ಶಂಕರ ಬಸುದೆ, ದುರ್ಗೇಶ ಭಜಂತ್ರಿ, ನಾಗರಾಜ ನಿಡಗುಂದಿ ಸೇರಿದಂತೆ ಹಲವಾರು ಕಲಾವಿದರು ಹಾಗೂ ಗಣ್ಯರು ಇತರರು ಇದ್ದರು.