ತರಬೇತಿ ಪಡೆದ ಸ್ವಚ್ಛತಾ ವಾಹಿನಿ ನೌಕರರಿಗೆ ಕೆಲಸ ನೀಡಿ

| Published : Jul 09 2024, 12:58 AM IST

ತರಬೇತಿ ಪಡೆದ ಸ್ವಚ್ಛತಾ ವಾಹಿನಿ ನೌಕರರಿಗೆ ಕೆಲಸ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ತರಬೇತಿ ಪಡೆದ ಸ್ವಚ್ಛತಾ ವಾಹಿನಿ ನೌಕರರಿಗೆ ಗ್ರಾಪಂಗಳಲ್ಲಿ ಕೆಲಸ ನೀಡುವಂತೆ ಆಗ್ರಹಿಸಿ ರಾಜ್ಯ ಗ್ರಾಪಂ ಸ್ವಚ್ಛವಾಹಿನಿ ಆಟೋ ಚಾಲಕರು ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತರಬೇತಿ ಪಡೆದ ಸ್ವಚ್ಛತಾ ವಾಹಿನಿ ನೌಕರರಿಗೆ ಗ್ರಾಪಂಗಳಲ್ಲಿ ಕೆಲಸ ನೀಡುವಂತೆ ಆಗ್ರಹಿಸಿ ರಾಜ್ಯ ಗ್ರಾಪಂ ಸ್ವಚ್ಛವಾಹಿನಿ ಆಟೋ ಚಾಲಕರು ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಶಾಖೆ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರು ಕಸ ವಿಲೇವಾರಿ ಮಾಡುವುದರಲ್ಲಿ ಪ್ರಮುಖರಾಗಿದ್ದು, ಕಸ ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಪ್ರಮುಖ ಅಭಿಯಾನವಾಗಿ ಸ್ವಚ್ಛ ಭಾರತ್ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದಾಗಿ ಕೇಂದ್ರ ಸರ್ಕಾರ ಉಲ್ಲೇಖ ಮಾಡಿದೆ. ಗ್ರಾಮಗಳ ಸ್ವಚ್ಛತೆ ಜವಾಬ್ದಾರಿ ವಹಿಸಿರುವಂತಹ ಸ್ವಚ್ಛ ವಾಹಿನಿ ನೌಕರರಿಗೆ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಪ್ರತಿಭಟನಾಕರರು ಆರೋಪಿಸಿದರು.

ರಾಜ್ಯ ಸರ್ಕಾರದಿಂದ ತರಬೇತಿ ಪಡೆದ ಸ್ವಚ್ಛ ವಾಹಿನಿ ನೌಕರರಿಗೆ ಗ್ರಾಪಂಗಳಲ್ಲಿ ಕೆಲಸ ನೀಡುತ್ತಿಲ್ಲ. ಸ್ವಚ್ಛ ವಾಹಿನಿ ಗಾಡಿಗಳಿಗೆ ವಿಮೆ ನವೀಕರಣ ಮಾಡಿಲ್ಲ. ಬೇಟಿ ಬಜಾವೋ, ಬೇಟಿ ಪಡಾವೋ ಎನ್ನುವ ಕೇಂದ್ರ ಸರ್ಕಾರವು ಜೀವದ ಹಂಗನ್ನು ತೊರೆದು ಸ್ವಚ್ಛತಾ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ವೇತನ ಬಾಕಿ ಉಳಿಸಿಕೊಂಡಿದೆ. ಸಿಬ್ಬಂದಿಗೆ ರಕ್ಷಣಾ ಸಲಕರಣಿ ಒದಗಿಸುತ್ತಿಲ್ಲ. ಇದರಿಂದಾಗಿ ನೌಕರರು ಸಾಂಕ್ರಾಮಿಕ ರೋಗಿಗಳಿಗೆ ತುತ್ತಾಗುತ್ತಿದ್ದಾರೆ ಎಂದು ದೂರಿದರು.

ಸ್ವಚ್ಛತಾ ವಾಹಿನಿ ಗಾಡಿಗಳಿಗೆ ವಿಮೆ ನವೀಕರಣ ಮಾಡಬೇಕು. ನೌಕರರನ್ನು ಗ್ರಾಪಂ ನೌಕರರೆಂದು ಪರಿಗಣಿಸಿ ಗ್ರಾಪಂ ನೌಕರರಿಗೆ ನೀಡುವ ಸೌಲಭ್ಯ ಜಾರಿಯಾಗಬೇಕು. ರಕ್ಷಣಾ ಸಲಕರಣೆ ಒದಗಿಸಬೇಕು. ಸ್ವಚ್ಛತಾ ವಾಹಿನಿ ಮಹಿಳಾ ಸಿಬ್ಬಂದಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಜಾರಿಯಾಗಬೇಕು. ತರಬೇತಿ ಪಡೆದ ಮಹಿಳಾ ಚಾಲಕರುಗಳಿಗೆ ಮಾತ್ರ ಆಟೋ ನೀಡಬೇಕು. ಗ್ರಾಪಂಗಳಲ್ಲಿ ಕೆಟ್ಟು ನಿಂತಿರುವ ಆಟೋಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ನಮ್ಮ ಎಲ್ಲಾ ಬೇಡಿಕೆ ಕೂಡಲೇ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಸಂಚಾಲಕ ಡಿ.ಎಂ.ಮರಿಯಪ್ಪ, ಮುಖಂಡರಾದ ಹನುಮಮ್ಮ, ಎಂ. ನಾರಾಯಣ್, ಮುನಿರಾಜು, ಕುಸುಮಬಾಯಿ ಇನ್ನಿತರರು ಭಾಗವಹಿಸಿದ್ದರು.