ನೌಕರರು ಸರ್ಕಾರದ ನಿಜವಾದ ರಕ್ಷಕರು

| Published : May 08 2025, 12:32 AM IST

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಹಾಗೂ ಜನರ ಸುಧಾರಣೆಗಾಗಿ ಜನಪ್ರತಿನಿಧಿಗಳು, ನೌಕರರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕಿದೆ. ದೇಶದ ಜನಸಂಖ್ಯೆ ಜತೆಗೆ ಬಡತನವು ಇದ್ದು ಅಭಿವೃದ್ಧಿ ಕಾರ್ಯ ಮಾಡಬೇಕಿದೆ. ಆಡಳಿತದಲ್ಲಿ ಪ್ರಾಮಾಣಿಕತೆಯು ಬರಬೇಕಿದೆ.

ಕೊಪ್ಪಳ:

ನೌಕರರು ಸರ್ಕಾರದ ನಿಜವಾದ ಕಸ್ಟೋಡಿಯನ(ರಕ್ಷಕ) ಗಳಾಗಿದ್ದು, ಇಚ್ಛೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಜತೆಗೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.

ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ನಡೆದ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಹಾಗೂ ಜನರ ಸುಧಾರಣೆಗಾಗಿ ಜನಪ್ರತಿನಿಧಿಗಳು, ನೌಕರರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕಿದೆ ಎಂದ ಅವರು, ದೇಶದ ಜನಸಂಖ್ಯೆ ಜತೆಗೆ ಬಡತನವು ಇದ್ದು ಅಭಿವೃದ್ಧಿ ಕಾರ್ಯ ಮಾಡಬೇಕಿದೆ. ಆಡಳಿತದಲ್ಲಿ ಪ್ರಾಮಾಣಿಕತೆಯು ಬರಬೇಕಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ಪರಿಣಾಮಕಾರಿಯಾಗಿ ಕಲಿಸಬೇಕು. ಶಿಕ್ಷಕರಿಗೆ ಸಮಸ್ಯೆಯಾಗದಂತೆ ಅವರ ವರ್ಗಾವಣೆ ಪ್ರಕ್ರಿಯೆಗೆ ಕೌನ್ಸೆಲಿಂಗ್‌ ತರಲಾಗಿದೆ. ಅಬಕಾರಿ, ಸಬ್ ರಿಜಿಸ್ಟ್ರಾರ್, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಇತರೆ ಇಲಾಖೆಗಳಲ್ಲಿಯೂ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಹೇಳಿದರು.

ಹಿಂದುಳಿದ ನಮ್ಮ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದ ಅವರು, ದೇಶದಲ್ಲಿಯೇ ಅತ್ಯುತ್ತಮ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ತಳಕಲ್‌ನಲ್ಲಿ ಮಾಡಲಾಗುತ್ತಿದೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ನೌಕರಿ ಸೇರಿದ ದಿನದಿಂದ ನಿವೃತ್ತಿ ಜೀವನದ ತನಕ ತಮ್ಮ ಕುಟುಂಬದ ‌ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಾರೆ ಎಂದರು.

‌ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನೌಕರರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ರಾಹುಲ್‌ ರತ್ನಂ ಪಾಂಡೇಯ, ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಆರ್. ಜುಮ್ಮನ್ನವರ ಮಾತನಾಡಿ, ಜಿಲ್ಲೆಯಲ್ಲಿ ಈಗಿರುವ ವಸತಿ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು ನೌಕರರಿಗೆ ಹೊಸ ವಸತಿ ಗೃಹ ನಿರ್ಮಿಸಬೇಕು. ತರಬೇತಿ ನೀಡಲು ಕಟ್ಟಡದ ಅವಶ್ಯಕತೆ ಇದೆ ನೀಡಬೇಕು. ಜಿಲ್ಲೆಯಲ್ಲಿ ಶೇ. 40 ಹುದ್ದೆಗಳು ಖಾಲಿ ಇದ್ದರು ಎಲ್ಲ ಕೆಲಸ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

ಸಿಂಧನೂರಿನ ಶ್ರೀಕೃಷ್ಣ ದೇವರಾಯ ವಿದ್ಯಾ ಸಂಸ್ಥೆಯ ಪ್ರಾಚಾರ್ಯರಾದ ಚಂದ್ರಕಲಾ ಪ್ರಕಾಶ, ವೃತ್ತಿ ಜೀವನದಲ್ಲಿ ಒತ್ತಡ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಎಡಿಸಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಪ್ರಾಥಮಿಕ ಶಾಲಾ- ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣ ಬಸನಗೌಡ ಪಾಟೀಲ್ ಸೇರಿದಂತೆ ನೌಕರರು, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

ಪ್ರಶಸ್ತಿ ಪ್ರದಾನ:

2023-24ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಘಟ್ಟಿರಡ್ಡಿಹಾಳ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಮಲ್ಲಮ್ಮ ಹೆಬ್ಬಾಳ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ, ಕೊಪ್ಪಳ ಜಿಲ್ಲಾ ಖಜಾನೆ ಉಪನಿರ್ದೇಶಕ ಕೆ. ಸುರೇಶ ಕೊಪ್ಪಳ, ಜಿಪಂ ಲೆಕ್ಕ ಅಧೀಕ್ಷಕ ಅಡವಿ ಅಶೋಕ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಸತೀಶ್ ಕುಮಾರ, ಯಲಬುರ್ಗಾ ತಹಸೀಲ್ದಾರ್‌ ಕಚೇರಿ ಶಿರಸ್ತೇದಾರ ದೇವರಡ್ಡಿ ಶರಣಪ್ಪ ಮೂಲಿಮನಿ, ಜಿಲ್ಲಾ ಲಸಿಕಾ ಉಗ್ರಾಣದ ಫಾರ್ಮಸಿ ಅಧಿಕಾರಿ ವಸಂತ ಬೆಲ್ಲದ, ತಳಕಲ್ ಗ್ರಾಪಂನ ಪಿಡಿಒ ವೀರನಗೌಡ ಚನವೀರನಗೌಡ, ಬೂದಗುಂಪಾದ ಗ್ರಾಮಾಡಳಿತ ಅಧಿಕಾರಿ ರಮೇಶ ನಾಯ್ಕ, ಭಾಗ್ಯನಗರ ಪಪಂನ ಹಿರಿಯ ಆರೋಗ್ಯ ನಿರೀಕ್ಷಕ ಪರಶುರಾಮ ಮಹೇಂದ್ರಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಿರಿಯ ಆರೋಗ್ಯ ಸಹಾಯಕ ರವಿನಾಗೇಶ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.