₹7,500 ಪಿಂಚಣಿ ನೀಡುವಂತೆ ನೌಕರರ ಆಗ್ರಹ

| Published : Aug 19 2024, 12:51 AM IST

ಸಾರಾಂಶ

ತಮಗೆ ಮಾಸಿಕ 7, 500 ರು ಪಿಂಚಣಿ ಹಾಗೂ ಆರೋಗ್ಯ ಪ್ರಯೋಜನಗಳನ್ನು ನೀಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಕಳೆದ 8 ವರ್ಷದಿಂದ ದೇಶಾದ್ಯಂತ ಹೋರಾಟ ನಡೆಸುತ್ತಿರುವ ಭವಿಷ್ಯನಿಧಿ ನಿವೃತ್ತ ನೌಕರರು ಆ. 31 ರೊಳಗೆ ತಮ್ಮ ಬೇಡಿಕೆಗೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಂದಿಸದೆ ಹೋದಲ್ಲಿ ಪರಿಸ್ಥಿತಿ ಚೆನ್ನಾಗಿರೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ತಮಗೆ ಮಾಸಿಕ 7, 500 ರು ಪಿಂಚಣಿ ಹಾಗೂ ಆರೋಗ್ಯ ಪ್ರಯೋಜನಗಳನ್ನು ನೀಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಕಳೆದ 8 ವರ್ಷದಿಂದ ದೇಶಾದ್ಯಂತ ಹೋರಾಟ ನಡೆಸುತ್ತಿರುವ ಭವಿಷ್ಯನಿಧಿ ನಿವೃತ್ತ ನೌಕರರು ಆ. 31 ರೊಳಗೆ ತಮ್ಮ ಬೇಡಿಕೆಗೆ ಕೇಂದ್ರದ ಬಿಜೆಪಿ ಸರ್ಕಾರ ಸ್ಪಂದಿಸದೆ ಹೋದಲ್ಲಿ ಪರಿಸ್ಥಿತಿ ಚೆನ್ನಾಗಿರೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ನಡೆದ ಕಲಬುರಗಿ, ವಿಜಯಪೂರ, ಬೀದರ್‌, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ನಿವೃತ್ತ ಇಪಿಎಸ್‌- 95 ನೌಕರರ ಸಮ್ಮೇಳನದಲ್ಲಿ ನೌಕರರು ಕೇಂದ್ರದ ವಿರುದ್ಧ ಗುಡುಗಿದ್ದಾರೆ. ತಮ್ಮದೇ ಲಕ್ಷಾಂತರ ಹಣ ಸಂಸ್ಥೆ ಹೊಂದಿದ್ದರೂ ಪಿಂಚಣಿ ನೀಡುವಲ್ಲಿ ಧಾರಾಳಯಾಕಿಲ್ಲ? ಜಿಪುಣತನ ಯಾಕೆಂದು ಕೇಂದ್ರದವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಸಮ್ಮೇಳನಕ್ಕೆಂದು ಕಲಬುರಗಿಗೆ ಆಗಮಿಸಿರುವ ಇಪಿಎಸ್‌- 95 ಎನ್‌ಎಸಿ ಕಮಿಟಿ ಅಧ್ಯಕ್ಷ ಅಶೋಕ ರಾವುತ್‌, ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸಿಂಗ್‌, ರಾಜ್ಯ ಅಧ್ಯಕ್ಷ ಜಿಎಸ್‌ಎಂ ಸ್ವಾಮಿ, ರಮಾಕಾಂತ ನರಗುಂದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭವಿಷ್ಯನಿಧಿ ಸಂಸ್ಥೆಯಲ್ಲಿ ನೌಕರರು ನೀಡಿರುವ ಕೊಡುಗೆ ರೂಪದ ಹಣವೇ ಸಾವಿರಾರು ಕೋಟಿ ರು. ಇದ್ದರೂ ಕೂಡಾ ನೌಕರರು ನಿವೃತ್ತಿ ನಂತರ ಸಾವಿರ ರುಪಾಯಿಯಷ್ಟು ಪಿಂಚಣಿ ನೀಡಿ ಸಾಗ ಹಾಕಲಾಗುತ್ತಿದೆ. ಇದರಿಂದ ನೌಕರರು ಪರದಾಡುವಂತಾಗಿದೆ ಎಂದು ನೌಕರರ ಸಂಕಷ್ಟಗಳನ್ನು ವಿವರಿಸಿ, ಪ್ರಧಾನಿ ಮೋದಿ 2 ಬಾರಿ ಮಾತುಕತೆ ಮಾಡಿದ್ದಾರೆ. ಇಂದಿಗೂ ಪರಿಹಾರ ನೀಡುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿದರು.

ದೇಶಾದ್ಯಂತ ಸರಾಸರಿ ಭವಿಷ್ಯನಿಧಿ ಇರುವ ನಿವೃತ್ತ ನೌಕರರಿಗೆ 1117 ರು. ಪಿಂಚಣಿ ಸರಾಸರಿ ನೀಡಲಾಗುತ್ತಿದೆ. ಮಕ್ಕಳಿರುವ ಸಂಸಾರ ನಡೆಯಲು 7,500 ರು. ಬೇಕೆ ಬೇಕು. ಆರೋಗ್ಯ ಸವಲತ್ತುಗಳೊಂದಿಗೆ ಈ ಮೊತ್ತ ನಮಗೆಲ್ಲರಿಗೂ ನೀಡಲೇಬೇಕು ಎಂದು ಅಶೋಕ ರಾವುತ್‌ ಆಗ್ರಹಿಸಿದರು.

ರಾಜ್ಯಾಧ್ಯಕ್ಷ ಜಿಎಸ್‌ಎಂ ಸ್ವಾಮಿ ಮಾತನಾಡುತ್ತ, ರಾಜ್ಯದಲ್ಲಿ 6.5 ಲಕ್ಷ ಇಪಿಎಸ್‌ ನೌಕರರಿದ್ದೇವೆ. ದೇಶಾದ್ಯಂತ 7. 8 ಕೋಟಿಯಷ್ಟಿದ್ದೇವೆ. ನಮ್ಮ ಸಾವಿರಾರು ಕೋಟಿ ರು ಸಂಸ್ಥೆಯಲ್ಲಿದೆ. ಅದರ ಬಡ್ಡಿಯೇ ವಾರ್ಷಿಕ 90 ಸಾವಿರ ಕೋಟಿ ರು. ಬರುತ್ತದೆ. ನಮಗೆ ಪಿಂಚಣಿ ರೂಪದಲ್ಲಿ ಈ ಬಡ್ಡಿ ಹಣದ ಶೇ.30ರಷ್ಟೂ ಹಣ ವೆಚ್ಚ ಮಾಡುತ್ತಿಲ್ಲ. ನಮ್ಮಿಂದಲೇ ಕೊಡುಗೆ ಪಡೆದು ನಮಗೇ ಹೀಗೆ ಬೀದಿಗೆ ತಳ್ಳುವುದರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದರು.

ಇಪಿಎಸ್‌- 95 ರಾಷ್ಟೀಯ ಆಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಸಿಂಗ್‌ ಮಾತನಾಡಿ,

ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಆ.31ರೊಳಗೆ ಸ್ಪಂದಿಸದಿದ್ದಲ್ಲಿ ರಾಷ್ಟ್ರವ್ಯಾಪ್ತಿ ಇಪಿಎಸ್‌ ನೌಕರರು ಬಿಜೆಪಿ, ಕೇಂದ್ರದ ವಿರುದ್ಧ ತಮ್ಮ ನಿಲುವು ತಳೆಯಲಿದ್ದಾರೆಂದು ಎಚ್ಚರಿಸಿದರು.

ಇಪಿಎಸ್‌ ನಿವೃತ್ತ ನೌಕರರು ನಿಧನರಾಗಿದ್ದಲ್ಲಿ ಅವರ ಪತ್ನಿಯರಿಗೂ ಶೇ.100ರಷ್ಟು ಪಿಂಚಣಿ ನೀಡಬೇಕು. ಎಲ್ಲಾ ಇಪಿಎಸ್‌- 95 ನೌಕರರಿಗೆ 5000 ರು. ಸದಸ್ಯರಲ್ಲದ ಉದ್ಯೋಗಿಗಳಿಗೂ ನೀಡಬೇಕು ಎಂದು ಅಶೋಕ ರಾವೂತ್‌, ಸಿಂಗ್‌ ಆಗ್ರಹಿಸಿದರು.

ಇಪಿಎಸ್‌ 95 ರಾಷ್ಟ್ರೀಯ ಸಂಯೋಜಕ ರಮಾಕಾಂತ ನರಗುಂದ, ರಾಜ್ಯ ಪ್ರ. ಕಾರ್ಯದರ್ಶಿ ಮಂಜುನಾಥ ಚಿಂತಾಮಣಿ, ಶೋಭಾ, ಸರಿತಾ ತಾಯಿ, ಇಪಿಎಸ್‌ ಕಲಬುರಗಿ ವಿಭಾಗದ ಸಂಯೋಜಕರಾದ ಎಸ್‌ ಎಸ್ ಹಿರೇಮಠ ಸೇರಿದಂತೆ ಪ್ರಮುಖರು ಸಮ್ಮೇಳನ ಹಾಗೂ ಸುದ್ದಿಗೋಷ್ಠಿಯಲ್ಲಿ ಮುಂಚೂಣಿಯಲ್ಲಿದ್ದರು.