ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ವಿಚಾರದಲ್ಲಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಸಾರಿಗೆ ನೌಕರರ ಕೂಟದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಪಿ. ಅಶೋಕ್ ಆರೋಪಿಸಿದರು. ನಮ್ಮ ಕೂಟದ ವತಿಯಿಂದ 17 ಮಂದಿ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ನಮಗೆ ಮತದಾರರ ಪೂರ್ಣ ಮಾಹಿತಿ ಇರುವ ಪಟ್ಟಿಯನ್ನು ಅವರು ನೀಡುತ್ತಿಲ್ಲ ಎಂದು ದೂರಿದರು. ನಮ್ಮ ವಿರುದ್ದ ಸ್ಪರ್ಧಿಸಿರುವ ಎಲ್ಲರಿಗೂ ಜಿಲ್ಲೆಗಳ ವ್ಯಾಪ್ತಿಯ ಎಲ್ಲ ಘಟಕಗಳ ಮತದಾರ ಸದಸ್ಯರ ಮೊಬೈಲ್ ಸಂಖ್ಯೆ ಸಹಿತ ಮಾಹಿತಿ ನೀಡಿದ್ದು, ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದ ಅವರು, ಈ ವಿಚಾರದಲ್ಲಿ ನಮಗೆ ಚುನಾವಣಾಧಿಕಾರಿಗಳು ಮತ್ತು ಸಹಕಾರ ಇಲಾಖೆಯ ಮೇಲಾಧಿಕಾರಿಗಳು ನೆರವಿಗೆ ಬರಬೇಕು ಎಂದು ಕೋರಿದರು. ಕೂಡಲೇ ನಮಗೆ ಸಂಘದ ಅರ್ಹ ಮತದಾರರ ಪಟ್ಟಿಯನ್ನು ಮೊಬೈಲ್ ಸಂಖ್ಯೆಗಳ ಸಹಿತ ನೀಡದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.ಚುನಾವಣಾಧಿಕಾರಿ ಕೆ.ಎಲ್.ಸವಿತಾ ಅವರಿಗೆ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ಹಲವರು ನಾಮಪತ್ರ ಸಲ್ಲಿಸಿದರು.