ಸಾರಾಂಶ
ಮುಂಬರುವ ಸಚಿವ ಸಂಪುಟ ಸಭೆಯಲ್ಲಿಯೇ ಎನ್‌ಪಿಎಸ್ ರದ್ದತಿ ವಿಷಯವನ್ನು ಪ್ರಮುಖ ಅಜೆಂಡಾವಾಗಿ ತೆಗೆದುಕೊಂಡು ಅತೀ ಶೀಘ್ರವಾಗಿ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿ ಮಾಡಬೇಕು.
ಭಟ್ಕಳ:
ಪಟ್ಟಣದ ಬಂದರ ರಸ್ತೆಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಉದ್ಯಾನದಲ್ಲಿ ರಾಜ್ಯ ಸಂಘದ ನಿರ್ದೇಶನದಂತೆ ಇತ್ತೀಚೆಗೆ ತಾಲೂಕು ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಒಪಿಎಸ್ ಹಕ್ಕೊತ್ತಾಯ ಚಿಂತನಾ ಸಭೆ ನಡೆಯಿತು.ಈ ವೇಳೆ ಮಾತನಾಡಿದ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಗಣೇಶ ಹೆಗಡೆ, ರಾಜ್ಯ ಸರ್ಕಾರವು ಈಗಾಗಲೇ ನಮ್ಮ ಸಂಘಕ್ಕೆ ಎನ್‌ಪಿಎಸ್ ರದ್ದತಿ ಮಾಡುವ ಬಗ್ಗೆ ಭರವಸೆ ನೀಡಿದೆ. ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಹಾಕಿಕೊಂಡಿತ್ತು ಹಾಗೂ 6ನೇ ಗ್ಯಾರಂಟಿಯಾಗಿ ಒಪಿಎಸ್ ನೀಡಲು ಸರ್ಕಾರ ನಿರ್ಧರಿಸಿರುವುದನ್ನು ಸಂಘದ ಸದಸ್ಯರು ಸ್ವಾಗತಿಸುತ್ತೇವೆ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿಯೇ ಎನ್‌ಪಿಎಸ್ ರದ್ದತಿ ವಿಷಯವನ್ನು ಪ್ರಮುಖ ಅಜೆಂಡಾವಾಗಿ ತೆಗೆದುಕೊಂಡು ಅತೀ ಶೀಘ್ರವಾಗಿ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿ ಮಾಡಬೇಕು ಹಾಗೂ ಕೂಡಲೇ ನೌಕರರ ವೇತನದಿಂದ ಕಟಾವಣೆಯಾಗುತ್ತಿರುವ ವಂತಿಗೆ ಸ್ಥಗಿತಗೊಳಿಸಿ ಎನ್‌ಪಿಎಸ್ ನೌಕರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸಭೆಯಲ್ಲಿ ಸಹ ಎಲ್ಲ ಎನ್‌ಪಿಎಸ್ ನೌಕರರು ಈ ಬಗ್ಗೆ ಹಕ್ಕೊತ್ತಾಯ ಮಾಡಿದರು.ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಶೇಖರ ಪೂಜಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಶ್ರೀರಾಮ ಪೂಜಾರಿ, ನೌಕರರ ಸಂಘದ ಸದಸ್ಯ ವೆಂಕಟೇಶ ನಾಯ್ಕ, ವೆಂಕಟೇಶ ದೇವಡಿಗ ಹಾಗೂ ವಿವಿಧ ಇಲಾಖೆಗಳ ಎನ್‌ಪಿಎಸ್ ನೌಕರರು ಉಪಸ್ಥಿತರಿದ್ದರು. ಎನ್‌ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ಗುಡ್ಡಪ್ಪ ಸ್ವಾಗತಿಸಿ, ವಂದಿಸಿದರು.