ಸರ್ಕಾರಿ ನೌಕರರಲ್ಲಿ ಹೆಚ್ಚಾಗಿ ಸಾರ್ವಜನಿಕರಿಗೆ ಸರ್ಕಾರಿ ಶಾಲೆ ಶಿಕ್ಷಕರ ಸಂಪರ್ಕ ನೇರವಾಗಿ ಇರುತ್ತದೆ

ಕಾರಟಗಿ: ಸರ್ಕಾರಿ ನೌಕರರು ಮುಖ್ಯವಾಗಿ ಶಿಕ್ಷಕರು ಕರ್ನಾಟಕ ನಾಗರೀಕ ಸೇವಾ ನಿಯಮಗಳಲ್ಲಿರುವ ಸೇವಾ ಶಿಷ್ಟಾಚಾರ ಪರಿಪಾಲನೆ ಮಾಡಬೇಕೆಂದು ನಿವೃತ್ತ ಖಜಾನಾಧಿಕಾರಿ ಕೆ.ಎಸ್. ಶ್ರೀಹರಿ ಹೇಳಿದರು.

ಇಲ್ಲಿನ ಸಿಎಂಎನ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸರ್ಕಾರಿ ನೌಕರರಿಗೆ ಏರ್ಪಡಿಸಿದ್ದ ಮಾಹಿತಿ ಹಕ್ಕು ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಕುರಿತ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು.

ಸರ್ಕಾರಿ ನೌಕರರಲ್ಲಿ ಹೆಚ್ಚಾಗಿ ಸಾರ್ವಜನಿಕರಿಗೆ ಸರ್ಕಾರಿ ಶಾಲೆ ಶಿಕ್ಷಕರ ಸಂಪರ್ಕ ನೇರವಾಗಿ ಇರುತ್ತದೆ. ಹಳ್ಳಿ ಜನರ ನಡುವೆ ಸೇವೆ ಸಲ್ಲಿಸವ ಶಿಕ್ಷಕರ ಬಗ್ಗೆ ಬಹಾಳ ಗೌರವ ಇರುತ್ತದೆ. ಹೀಗಾಗಿ ಮೊದಲು ಶಿಕ್ಷಕರು ಸೇವಾ ಶಿಷ್ಟಾಚಾರ, ಕರ್ತವ್ಯ-ಹಕ್ಕುಗಳ ಬಗ್ಗೆ ತಿಳಿದುಕೊಂಡು ಸೇವಾವಧಿಯಲ್ಲಿ ಪಾಲನೆ ಮಾಡಬೇಕು. ಶಿಕ್ಷಕರು ಹೆಚ್ಚು ರಾಜಕೀಯದಲ್ಲಿ ತೊಡಗಿರುತ್ತಾರೆ ಎನ್ನುವ ಅಪವಾದ ಗ್ರಾಮೀಣ, ತಾಲೂಕು ಮಟ್ಟದಲ್ಲಿ ಹೆಚ್ಚಾಗಿ ಕೇಳಿ ಬರುತ್ತದೆ. ಇದರಿಂದ ಎಚ್ಚೇತ್ತುಕೊಳ್ಳುವುದು ಉತ್ತಮ ಎಂದು ತಿಳಿಹೇಳಿದರು.

ಮಾಹಿತಿ ಹಕ್ಕು ಕಾಯ್ದೆಯ ಇತ್ತೀಚಿನ ತಿದ್ದುಪಡಿ, ಮಾಹಿತಿ ಒದಗಿಸುವ ಅಧಿಕಾರಿಗಳ ಜವಾಬ್ದಾರಿ, ಸಾರ್ವಜನಿಕರಿಗೆ ಸಮಯೋಚಿತ ಮಾಹಿತಿ ನೀಡುವ ಪ್ರಕ್ರಿಯೆಗಳು ಮತ್ತು ಪಾರದರ್ಶಕ ಆಡಳಿತಕ್ಕೆ ಆರ್.ಟಿ.ಐಯ ಪಾತ್ರ ಕುರಿತು ಸವಿಸ್ತಾರ ಮಾಹಿತಿ ನೀಡಿದರು.

ಕರ್ನಾಟಕ ನಾಗರೀಕ ಸೇವಾ ನಿಯಮಗಳಲ್ಲಿರುವ ಸೇವಾ ಶಿಷ್ಟಾಚಾರ, ಕರ್ತವ್ಯ-ಹಕ್ಕುಗಳು, ಬಡ್ತಿ- ಸ್ಥಳಾಂತರ ನಿಯಮಗಳು ಮತ್ತು ಶಿಸ್ತುಕ್ರಮ ಕುರಿತು ವಿಸ್ತೃತ ಚರ್ಚೆ ಮೂಲಕ ನೌಕರರಿಗೆ ಮಾಹಿತಿ ಇರಬೇಕೆಂದು ಶ್ರೀಹರಿ ವಿವರಿಸಿದರು.

ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ, ಭವಿಷ್ಯತ್ತಿನಲ್ಲಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಂಘ ನೀಡುವ ಸೂಚನೆಗಳ ಅನುಸಾರ ಸಂಘಟಿತ ಪ್ರಯತ್ನ ಮಾಡುವೆ. ನೂತನ ತಾಲೂಕು ಕೇಂದ್ರವಾದ ಕಾರಟಗಿಯಲ್ಲಿ ನೌಕರರ ಭವನ ಇಲ್ಲ. ಆ ಕಾರಣಕ್ಕೆ ಸಚಿವ ಶಿವರಾಜ ತಂಗಡಗಿಯವರ ಸಹಾಯ-ಸಹಕಾರದಿಂದ ಇಲ್ಲಿ ನಿವೇಶನ ಪಡೆದು ಸುಸಜ್ಜಿತ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.

ಲೆಕ್ಕಪತ್ರ ಅಂಗೀಕಾರ:

ಇದೇ ಸಭೆಯಲ್ಲಿ ನೌಕರರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. 2024-25ನೇ ಸಾಲಿನಲ್ಲಿ ಬಳಕೆಯಾಗಿರುವ ವಾರ್ಷಿಕ ಲೆಕ್ಕಪತ್ರ ಹಾಗೂ ತಾತ್ಕಾಲಿಕ ಜಮಾ ಖರ್ಚು ಓದಿ ಅಂಗೀಕರಿಸಲಾಯಿತು.

ಈ ಸಂದರ್ಭದಲ್ಲಿ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ರಾಮು ನಾಯಕ, ತಾಲೂಕಾಧ್ಯಕ್ಷ ಡಾ. ವೆಂಕಟೇಶ ನಾಯಕ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ ರ‍್ಯಾವಳದ, ರಾಜ್ಯ ಪರಿಷತ್ ಸದಸ್ಯ ಮಂಜುನಾಥ್ ಹಿರೇಮಠ, ಕಾರ್ಯದರ್ಶಿ ವೆಂಕೋಬ, ಹಿರಿಯ ನಿರ್ದೇಶಕ ಅಮರೇಶ ಮೈಲಾಪುರ, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮೈಲಾಪುರ, ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಹಂಪನಗೌಡ ಸೇರಿದಂತೆ ಸಂಘದ ಹಿರಿಯ ಉಪಾಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.