ಸಾರಾಂಶ
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.ಕರ್ನಾಟಕ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ(ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಬೇಕು. ಭವಿಷ್ಯವರ್ತಿಯಾಗಿ 2006ರ ಏಪ್ರಿಲ್ 1 ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಅನುದಾನಕ್ಕೂ ಪೂರ್ವದ ಸೇವೆಯನ್ನು ಕೇವಲ ಪಿಂಚಣಿ ಸೌಲಭ್ಯಕ್ಕೆ ಮಾತ್ರ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಆಡಳಿತದಲ್ಲಿರುವ ಪಕ್ಷವು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್‍ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ತರುವ ಭರವಸೆ ನೀಡಿದೆ. 2006 ಏಪ್ರಿಲ್ 1ರ ನಂತರ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ನೀಡಿರುವಂತೆ ಹಳೆಯ ಡಿಫೈನ್ಡ್ ಪಿಂಚಣಿ ಸೌಲಭ್ಯವನ್ನು ಅನುದಾನಿತ ಸಂಸ್ಥೆಗಳಲ್ಲಿ ಇರುವ ಸಮಾನ ಪ್ರಕರಣಗಳಿಗೂ ಅನ್ವಯಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.ಈ ಬೇಡಿಕೆಗಳ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಸಮಾವೇಶ ಸಹ ನಡೆಸಲಾಗಿದೆ. ಆದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಸೆ.5ರೊಳಗೆ ಬೇಡಿಕೆ ಈಡೇರಿಸದೇ ಹೋದಲ್ಲಿ ಶಾಲಾ ಕಾಲೇಜು ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂಘದ ಅಧ್ಯಕ್ಷ ಎಚ್.ನಾಗ ರಾಜಪ್ಪ, ಕಾರ್ಯದರ್ಶಿ ಶಿವಕುಮಾರ್, ತಿಪ್ಪೇಶ, ರವಿ ಭದ್ರಾವತಿ, ರಮೇಶ್ ಸೊರಬ, ರಾಜಪ್ಪ ಇನ್ನಿತರರಿದ್ದರು.
‘ಓಪಿಎಸ್ ಜಾರಿಯು ವಿಳಂಬವಾದರೆಎನ್ಪಿಎಸ್ ಯಥಾವತ್ ಜಾರಿಯಾಗ್ಲಿ’
ಓಪಿಎಸ್ ಜಾರಿ ವಿಳಂಬ ಆದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್‍ಪಿಎಸ್ ಯೋಜನೆಯನ್ನು ಯಥಾವತ್ತಾಗಿ ಅನುದಾನಿತ ನೌಕರರಿಗೂ ನೀಡ ಬೇಕು. ನೇಮಕಾತಿ ಪ್ರಾಧಿಕಾರದ ಪಾಲಿನ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಿಗೆ ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳಬೇಕು. ಅನುದಾನಿತ ನೌಕರ ರಿಗೂ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಆರೋಗ್ಯ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು. 2002 ರಿಂದ 2020ರವರೆಗೆ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮರಣ, ನಿವೃತ್ತಿ, ರಾಜೀನಾಮೆ ಮತ್ತಿತರ ಕಾರಣಗಳಿಗೆ ಖಾಲಿ ಆಗಿರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.