ಮುಷ್ಕರಕ್ಕೆ ನೌಕರರ ಸಂಘ ಬೆಂಬಲ

| Published : Feb 15 2025, 12:30 AM IST

ಸಾರಾಂಶ

ಐವತ್ತು ವರ್ಷಗಳ ಹಿಂದೆ ವೃತ್ತ ಹಾಗೂ ಹೋಬಳಿ ವಿಂಗಡಣೆ ಮಾಡಿದ್ದು, ಆಗ 200 ಜನರಿದ್ದ ಗ್ರಾಮ ಈಗ 2000 ಸಂಖ್ಯೆಗೆ ಏರಿದ್ದು ಕೂಡಲೇ ಮರು ವಿಂಗಡಣೆ ಮಾಡಬೇಕು. ಮಳೆ ವಿಮೆ ಬೆಳೆ ಸಮೀಕ್ಷೆ ಪರಿಹಾರ ಹೀಗೆ ಅನ್ಯ ಇಲಾಖೆಗಳ ಕರ್ತವ್ಯಗಳನ್ನು ನಮಗೆ ಕೊಡುತ್ತಿದ್ದು ಇದನ್ನು ನಿಲ್ಲಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳು ಜಿಲ್ಲೆಯೊಳಗೆ ಕಾರ್ಯ ನಿರ್ವಹಿಸಬೇಕಿದ್ದು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಲು ಅವಕಾಶ ಇಲ್ಲದೆ ಹೊರ ಜಿಲ್ಲೆಯಲ್ಲಿರುವ ವೃದ್ಧ ಪೋಷಕರನ್ನು ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳು ಸಮಸ್ಯೆ ಹೇಳಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಳು ತಾಲೂಕು ಕಚೇರಿ ಮುಂಭಾಗ ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯ ನೌಕರರ ಸಂಘದ ತಾಲೂಕು ಘಟಕದವರು ಬೆಂಬಲ ಸೂಚಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಆಡಳಿತ ಅಧಿಕಾರಿಗಳು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್‌ಮಂಜುನಾಥ್, ನಿರ್ದೇಶಕ ಭಾನುಪ್ರಕಾಶ್ ಮಾತನಾಡಿ, 2010ರಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಆಗಿಂದ ಈವರೆಗೂ ಯಾವುದೇ ಮುಂಬಡ್ತಿ ಕೊಟ್ಟಿರುವುದಿಲ್ಲ. ನಮ್ಮದು ತಾಂತ್ರಿಕ ಹುದ್ದೆ ಆಗಿರುವುದಿಲ್ಲ, ಆದರೆ ಈಗ ಹೆಚ್ಚಾಗಿ ತಾಂತ್ರಿಕ ಕೆಲಸಗಳನ್ನೇ ಕೊಡಲಾಗುತ್ತಿದೆ. ಹಾಗಾಗಿ ನಮ್ಮನ್ನು ತಂತ್ರಜ್ಞರು ಎಂದು ಪರಿಗಣಿಸಿ ಹೆಚ್ಚಿನ ವೇತನ ನೀಡಬೇಕು. ಕೆಲವೊಮ್ಮೆ ಅಕ್ರಮ ಮರಳು ದಂಧೆ ಹಾಗೂ ಇತರೆ ರಾತ್ರಿ ಪಾಳಿಗೆ ನಮ್ಮನ್ನು ಕರೆದುಕೊಂಡು ಹೋಗಲಾಗುತ್ತದೆ. ಈ ಸಂದರ್ಭದಲ್ಲಿ ಜೀವ ಹಾನಿಯಾದಾಗ ಐದರಿಂದ 10 ಲಕ್ಷ ಪರಿಹಾರ ಕೊಡುತ್ತಿದ್ದು 50 ಲಕ್ಷಕ್ಕೆ ಏರಿಸಬೇಕು. ಪ್ರಯಾಣ ಭತ್ಯೆ ಎಂದು ತಿಂಗಳಿಗೆ 500 ಕೊಡುತ್ತಿದ್ದು, ಅದನ್ನು 5,000ಕ್ಕೆ ಏರಿಸಬೇಕು. ರಜಾ ದಿನಗಳಲ್ಲೂ ನಮ್ಮಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಕ್ರಮವನ್ನು ಬಿಡಬೇಕು ಎಂದರು.

ಐವತ್ತು ವರ್ಷಗಳ ಹಿಂದೆ ವೃತ್ತ ಹಾಗೂ ಹೋಬಳಿ ವಿಂಗಡಣೆ ಮಾಡಿದ್ದು, ಆಗ 200 ಜನರಿದ್ದ ಗ್ರಾಮ ಈಗ 2000 ಸಂಖ್ಯೆಗೆ ಏರಿದ್ದು ಕೂಡಲೇ ಮರು ವಿಂಗಡಣೆ ಮಾಡಬೇಕು. ಮಳೆ ವಿಮೆ ಬೆಳೆ ಸಮೀಕ್ಷೆ ಪರಿಹಾರ ಹೀಗೆ ಅನ್ಯ ಇಲಾಖೆಗಳ ಕರ್ತವ್ಯಗಳನ್ನು ನಮಗೆ ಕೊಡುತ್ತಿದ್ದು ಇದನ್ನು ನಿಲ್ಲಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳು ಜಿಲ್ಲೆಯೊಳಗೆ ಕಾರ್ಯ ನಿರ್ವಹಿಸಬೇಕಿದ್ದು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಲು ಅವಕಾಶ ಇಲ್ಲದೆ ಹೊರ ಜಿಲ್ಲೆಯಲ್ಲಿರುವ ವೃದ್ಧ ಪೋಷಕರನ್ನು ನೋಡಿಕೊಳ್ಳಲು ಆಗುತ್ತಿಲ್ಲ. ಒಟ್ಟು 23 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು ಇದಕ್ಕಾಗಿ ಆರ್ಥಿಕ ಇಲಾಖೆಯ ಒಪ್ಪಿಗೆ ಅವಶ್ಯಕತೆ ಇರುವುದಿಲ್ಲ. ಕಂದಾಯ ಇಲಾಖೆ ಈಗಲೂ ಮನಸ್ಸು ಮಾಡಿದರೆ ಒಂದು ದಿನದಲ್ಲಿ ಪರಿಹರಿಸಬಹುದು. ಮೇಲ್ಕಂಡ ಎಲ್ಲಾ ಕಾರಣಗಳಿಗಾಗಿ ಮುಷ್ಕರದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿಗೆ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ನೌಕರರ ಸಂಘದ ನಿರ್ದೇಶಕ ಭಾನುಪ್ರಕಾಶ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ರಮೇಶ್, ಆಯೇಶಾ ಬಾನು, ಧರ್ಮೇಗೌಡ, ಪೂರ್ಣೇಶ್, ಸಂತೋಷ, ಬಸಪ್ಪ, ಹನುಮಂತು ಇತರರು ಇದ್ದರು. ತಾಲೂಕು ನೌಕರರ ಸಂಘದ ವತಿಯಿಂದ ಮುಷ್ಕರ ನಿರತರಿಗೆ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.