ದೇಶದ ರಕ್ಷಣೆಗಾಗಿ ತಮ್ಮ ಮನೆ, ಮಠ, ಜಮೀನು ಹಾಗೂ ಕಡಲನ್ನು ತ್ಯಾಗ ಮಾಡಿ ನಿರಾಶ್ರಿತರಾದ ಸ್ಥಳೀಯ ಜನರಿಗೆ ಸೀಬರ್ಡ್ ನೌಕಾನೆಲೆಯಲ್ಲಿ ಉದ್ಯೋಗ ನೀಡುವಲ್ಲಿ ತೀವ್ರ ಅನ್ಯಾಯವಾಗುತ್ತಿದ್ದು, ಕೆಲಸಕ್ಕೆ ತೆರಳುವ ಸ್ಥಳೀಯರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಲಾಗುತ್ತಿದೆ ಎಂದು ನೌಕಾನೆಲೆ ನಿರಾಶ್ರಿತರು ಆರೋಪಿಸಿದ್ದಾರೆ.
ನಿರಾಶ್ರಿತರಿಂದ ಉಗ್ರ ಹೋರಾಟದ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಕಾರವಾರದೇಶದ ರಕ್ಷಣೆಗಾಗಿ ತಮ್ಮ ಮನೆ, ಮಠ, ಜಮೀನು ಹಾಗೂ ಕಡಲನ್ನು ತ್ಯಾಗ ಮಾಡಿ ನಿರಾಶ್ರಿತರಾದ ಸ್ಥಳೀಯ ಜನರಿಗೆ ಸೀಬರ್ಡ್ ನೌಕಾನೆಲೆಯಲ್ಲಿ ಉದ್ಯೋಗ ನೀಡುವಲ್ಲಿ ತೀವ್ರ ಅನ್ಯಾಯವಾಗುತ್ತಿದ್ದು, ಕೆಲಸಕ್ಕೆ ತೆರಳುವ ಸ್ಥಳೀಯರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಲಾಗುತ್ತಿದೆ ಎಂದು ನೌಕಾನೆಲೆ ನಿರಾಶ್ರಿತರು ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಾಶ್ರಿತ ವಿನೋದ ನಾಯ್ಕ, ನೌಕಾನೆಲೆಯಲ್ಲಿ ನೇರ ನೇಮಕಾತಿ ನಡೆಸುವ ಬದಲು ಕಾಂಟ್ರಾಕ್ಟರ್‌ಗಳು ಮತ್ತು ಏಜೆನ್ಸಿಗಳ ಮೂಲಕ ಒಳದಾರಿ ಹಿಡಿಯಲಾಗುತ್ತಿದೆ. ವಿಶೇಷವಾಗಿ ಆಂಧ್ರಪ್ರದೇಶದ ವೈಜಾಗ್‌ನಲ್ಲಿ ಅಪ್ರೆಂಟಿಸ್ ತರಬೇತಿ ಪಡೆದ ಸುಮಾರು 300 ಜನರನ್ನು ಇಲ್ಲಿಗೆ ಕರೆತಂದು ಕಾಯಂ ನೇಮಕಾತಿ ಮಾಡಿಕೊಳ್ಳಲಾಗಿದೆ. ಅಗತ್ಯ ಅರ್ಹತೆಯಿರುವ ಸ್ಥಳೀಯ ಮತ್ತು ಉತ್ತರ ಕನ್ನಡ ಭಾಗದ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅದಾಗಿಯೂ ಕೆಲಸಕ್ಕೆ ಸೇರಿರುವ ಕೆಲವೇ ಕೆಲವು ಸ್ಥಳೀಯರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಲಾಗುತ್ತಿದ್ದು, ಸ್ಥಳೀಯರು ಎನ್ನುವ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ. ನೌಕಾನೆಲೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸ್ಥಳೀಯ ಯೂನಿಯನ್‌ಗಳು ಪತ್ರ ಬರೆದರೂ ಅಧಿಕಾರಿಗಳು ಕನಿಷ್ಠ ಪ್ರತಿಕ್ರಿಯೆ ಅಥವಾ ಸ್ವೀಕೃತಿ ನೀಡುವ ಸೌಜನ್ಯ ತೋರುತ್ತಿಲ್ಲ. ಯೋಜನೆಗಾಗಿ ಭೂಮಿ ತ್ಯಾಗ ಮಾಡಿದ ಕುಟುಂಬಗಳಿಗೆ ಶೇ. 60ರಷ್ಟು ಉದ್ಯೋಗ ಮೀಸಲಾತಿ ನೀಡಬೇಕೆಂಬ ನ್ಯಾಯಾಲಯದ ಮತ್ತು ಕೋರ್ಟ್ ಕಮಿಷನ್ ಆದೇಶವಿದ್ದರೂ, ಸ್ಥಳೀಯರನ್ನು ಕಡೆಗಣಿಸಿ ಹೊರ ರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.ಈ ಕುರಿತು ಮಾತನಾಡಿದ ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, 1974ರಿಂದಲೂ ನಾವು ನೌಕಾನೆಲೆ ಯೋಜನೆ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅಂದು ರೈತರಿಗೆ ಮತ್ತು ಮೀನುಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಆದರೆ ವಾಸ್ತವದಲ್ಲಿ ಕೇವಲ 4-5 ಜನರಿಗೆ ಮಾತ್ರ ಕೆಲಸ ಸಿಕ್ಕಿದ್ದು, ಉಳಿದಂತೆ ಹೊರಗಿನವರೇ ತುಂಬಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನೌಕಾನೆಲೆಗೆ ರಾಷ್ಟ್ರಮಟ್ಟದಲ್ಲಿ ನೇಮಕಾತಿ ನಡೆಯುತ್ತಿದೆ ಎಂಬ ನೆಪವೊಡ್ಡಿ ಸ್ಥಳೀಯ ನಿರಾಶ್ರಿತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.
ಹೊರ ರಾಜ್ಯಗಳಿಂದ ಬಂದು ಇಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು ಅಕ್ರಮ ಮಾರ್ಗಗಳ ಮೂಲಕ ಹಣ ಸಂಪಾದಿಸಿ, ಸ್ಥಳೀಯವಾಗಿ ಅಂಕೋಲಾದವರೆಗೂ ಜಮೀನುಗಳನ್ನು ಖರೀದಿಸುತ್ತಿದ್ದಾರೆ. ಈ ಎಲ್ಲ ಅನ್ಯಾಯಗಳನ್ನು ಸರಿಪಡಿಸಿ, ಸ್ಥಳೀಯರಿಗೆ ಸೂಕ್ತ ಉದ್ಯೋಗ ಮತ್ತು ಮೀನುಗಾರಿಕೆ ಹಕ್ಕು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ನಿರಾಶ್ರಿತರು ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಪವನ ದುರ್ಗೇಕರ, ಪ್ರವೀಣ ತಾಂಡೇಲ, ದರ್ಶನ ನಾಯ್ಕ, ನಾಗರಾಜ ಗಾಂವ್ಕರ, ಮಾರುತಿ ನಾಯ್ಕ, ಉಮೇಶ ಕಾಂಚನ, ನರೇಶ ಹಾಗೂ ಇತರರು ಇದ್ದರು.