ಸಾರಾಂಶ
ಶಿರಸಿ: ವ್ಯಕ್ತಿಯ ಜೀವನ ನಿರ್ವಹಣೆಗೆ ಉದ್ಯೋಗದ ಅವಕಾಶ ಮಾಡಿಕೊಟ್ಟರೆ ಆ ಕುಟುಂಬವು ಬಡತನದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.
ಭಾನುವಾರ ನಗರದ ಮಾರಿಕಾಂಬಾ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಉತ್ತರಕನ್ನಡ ಜಿಲ್ಲಾ ಶಿಕ್ಷಕ, ಶಿಕ್ಷಕಿಯರ ನಿರಂತರ ಸಹಾಯವಾಣಿ, ಪಿಜಿಎಸ್‌ಎಸ್ ಇನ್ಸ್ಟಿಟ್ಯೂಟ್ ಆಫ್ ಫಾಯರ್ ಆ್ಯಂಡ್ ಸೇಫ್ಟಿ ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಮಾರಿಕಾಂಬಾ ಕಾಲೇಜು ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಕೈಗಾರಿಕೆಗಳು ಇಲ್ಲದ ಕಾರಣ, ಯುವಕರು ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ. ತಾಲೂಕಿನ ಇಸಳೂರು ಎಂಬ ಭಾಗದಲ್ಲಿ ೪೫೦ ಎಕರೆ ಕೃಷಿ ಜಾಗವು ಲೇಔಟ್ ಆಗಿದೆ. ಆ ಜಾಗದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದ್ದರೆ ನೂರಾರು ಜನರಿಗೆ ಉದ್ಯೋಗ ಲಭಿಸುತ್ತಿತ್ತು. ಇದರ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಜಿಲ್ಲೆಯ ವಿದ್ಯಾವಂತ ಯುವಕರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ನಿರ್ಮಾಣಕ್ಕೆ ಸರ್ಕಾರಗಳು ಅವಕಾಶ ಮಾಡಿಕೊಡಲು ವಿನೂತನ ಹೋರಾಟ ನಡೆಸಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಹೆಗಡೆ ಮಾತನಾಡಿ, ಪ್ರತಿಯೊಬ್ಬರಿಗೂ ಉದ್ಯೋಗ ಹಾಗೂ ವ್ಯಾಪಾರ ಮಾಡಬೇಕು ಎಂಬುದು ಇರುವುದು ಸಹಜ. ಉತ್ತಮ ವಿದ್ಯೆಯನ್ನು ಕಲಿತು ಇಂತಹ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರ ಮೂಲಕ ಉದ್ಯೋಗ ಗಳಿಸಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದರು.ಉದ್ಯೋಗ ಮೇಳದ ಸಭಾ ಕಾರ್ಯಕ್ರಮವನ್ನು ಅನುದಾನಿತ ಶಿಕ್ಷಣ ಸಂಸ್ಥೆಯ ಒಕ್ಕೂಟದ ಅಧ್ಯಕ್ಷ ಡಾ. ಶಶಿಭೂಷಣ್ ಹೆಗಡೆ ದೊಡ್ಮನೆ ಉದ್ಘಾಟಿಸಿದರು. ವೈಭವ ಮತ್ತು ಕಾಳಿದಾಸ ಸ್ಕೂಲ್‌ನ ಕಾರ್ಯದರ್ಶಿ ಮುರಳಿಧರ್ ಗಜೇಂದ್ರಗಡ, ಕಾಮಧೇನು ಜುವೆಲರ್ಸ್‌ನ ಪ್ರಕಾಶ್ ಪಾಲನಕರ, ಪಿಜಿಎಸ್‌ಎಸ್‌ನ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ರಾಜು ಕದಂ, ಉತ್ತರ ಕನ್ನಡ ಜಿಲ್ಲಾ ಶಿಕ್ಷಕ ಶಿಕ್ಷಕಿಯರ ಅಧ್ಯಕ್ಷ ವಿಶ್ವನಾಥ್ ಗೌಡ ಉಪಸ್ಥಿತರಿದ್ದರು.
ಉತ್ತಮ ಶಿಕ್ಷಕರು ಹಾಗೂ ಉತ್ತಮ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಡಿಸೈನಿಂಗ್ ಎಕ್ಸಿಬಿಷನ್ ಕಮ್ ಸೇಲ್ ಕಾರ್ಯಕ್ರಮವನ್ನು ನಡೆಸಲಾಯಿತು.ಉದ್ಯೋಗ ಮೇಳದಲ್ಲಿ ಸುಮಾರು ೪೦ಕ್ಕೂ ಅಧಿಕ ಎಂಎನ್‌ಸಿ ಕಂಪನಿಗಳು, ಹತ್ತಕ್ಕಿಂತ ಹೆಚ್ಚು ಬ್ಯಾಂಕುಗಳು, ೨೫ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿದ್ದವು. ೮೭೦ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ೪೮೦ಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಎಂಎನ್‌ಸಿ ಕಂಪನಿಗಳು ಆಯ್ಕೆ ಮಾಡಿಕೊಂಡಿದ್ದು, ಬ್ಯಾಂಕುಗಳು ೧೫೦ಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು, ಖಾಸಗಿ ಶಿಕ್ಷಣ ಸಂಸ್ಥೆಗಳು ೧೮೦ಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ.