ಹೊನ್ನಾವರ: ಉದ್ಯೋಗ ಬದುಕಿನ ಸಾಧನ ಅಷ್ಟೆ ಅಲ್ಲ. ಬದುಕು ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಸಾಧನ ಎಂದು ತಹಸೀಲ್ದಾರ್ ಪ್ರವೀಣ ಕರಾಂಡೆ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಶಿಕ್ಷಕ-ಶಿಕ್ಷಕಿಯರ ನಿರಂತರ ಸಹಾಯವಾಣಿ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಉದ್ಯೋಗ ಮೇಳದಲ್ಲಿ ಮಾತನಾಡಿದರು. ಉದ್ಯೋಗದಿಂದ ಆರ್ಥಿಕವಾಗಿ ಸದೃಢರಾಗುತ್ತೇವೆ. ಆರ್ಥಿಕವಾಗಿ ಬಲಗೊಂಡರೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ನಮ್ಮ ಬದುಕಿನ ಬಹುತೇಕ ಚಿಂತೆಗಳು ಕಡಿಮೆ ಆಗುತ್ತದೆ. ಈಗ ಅವಕಾಶಗಳು ಹೆಚ್ಚಿವೆ. ಅದನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ. ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ನೊಂದವರಿಗೆ ಸಹಾಯ ಮಾಡುವ ಗುಣ ಬೆಳೆಯಬೇಕು. ಈ ಹಿಂದೆ ಉದ್ಯೋಗ ಪಡೆಯಲು ಅರ್ಜಿ ಹಾಕಿ ಕಾಯಬೇಕಿತ್ತು. ಈಗ ಉದ್ಯೋಗವೇ ಮನೆ ಬಾಗಿಲಿಗೆ ಬರುತ್ತಿದೆ. ಆದರೆ ಆಕಾಂಕ್ಷಿಗಳಿಗೆ ಆಸಕ್ತಿ ಕಡಿಮೆ ಆಗಿದೆ. ಸಮಾಜದ ಮುಖ್ಯವಾಹಿನಿಗೆ ಬರಲು ಎಲ್ಲರೂ ಪ್ರಯತ್ನಿಸಬೇಕು ಎಂದರು. ಇದೆ ಸಂದರ್ಭದಲ್ಲಿ ಯುಗಾದಿ ಪುರಸ್ಕಾರ -26, ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ, ಅಲ್ಲದೆ ದೇಶಭಕ್ತಿ ಸಂಚಲನ ಬಹುಮಾನ ವಿತರಿಸಲಾಯಿತು.

ಬಾಷ್ ಕಂಪನಿಯ ಗುರುಮೂರ್ತಿ, ಹುಬ್ಬಳ್ಳಿಯ ಶ್ರೀ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ವೀರಭದ್ರ, ಕಾರವಾರ ಆಟೋ ಚಾಲಕ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಮಾತನಾಡಿದರು.

ಉಪನ್ಯಾಸಕಿ ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಎಂ.ಪಿ.ಇ. ಸೊಸೈಟಿ ಪಿಆರ್‌ಒ ಡಾ. ಡಿ.ಎಲ್. ಹೆಬ್ಬಾರ್ ಸ್ವಾಗತಿಸಿದರು. ಉತ್ತರ ಕನ್ನಡ ಜಿಲ್ಲಾ ಶಿಕ್ಷಕ-ಶಿಕ್ಷಕಿಯರ ನಿರಂತರ ಸಹಾಯವಾಣಿ ಅಧ್ಯಕ್ಷ ವಿಶ್ವನಾಥ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಎನ್. ಭಟ್ ವಂದಿಸಿದರು. ಉಪನ್ಯಾಸಕ ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.