ವಿದ್ಯಾರ್ಥಿಗಳಿಗೆ ಶಿಕ್ಷಣದಷ್ಟೇ ಉದ್ಯೋಗವೂ ಮುಖ್ಯ : ಕೆ. ಷಡಕ್ಷರಿ

| Published : Jan 10 2025, 12:46 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟರೆ ಸಾಲದು ಅವರಿಗೆ ಉದ್ಯೋಗದ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟರೆ ಸಾಲದು ಅವರಿಗೆ ಉದ್ಯೋಗದ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಕಲ್ಪತರು ಕಾಲೇಜು ಕ್ರೀಡಾಂಗಣದಲ್ಲಿ ಕಲ್ಪತರು ವಿದ್ಯಾಸಂಸ್ಥೆ ನೇತೃತ್ವದಲ್ಲಿ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ, ಕಲ್ಪತರು ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜು ಮತ್ತು ಪಲ್ಲಾಗಟ್ಟಿ ಅಡವಪ್ಪ ಕಲಾ ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ದುಬಾರಿಯಾಗುತ್ತಿದ್ದು ಶಿಕ್ಷಣ ಸಂಸ್ಥೆಗಳು ಶಿಕ್ಷಣಕ್ಕೆ ಒತ್ತು ನೀಡಿದಷ್ಟೇ ಉದ್ಯೋಗಕ್ಕೂ ಒತ್ತು ನೀಡಿ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಬದುಕನ್ನು ಪರಿಪೂರ್ಣಗೊಳಿಸಬೇಕು. ವಿದ್ಯಾರ್ಥಿಗಳು ನಿರುದ್ಯೋಗಿಗಳಾಗದೆ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗವನ್ನು ಹುಡುಕಿಕೊಂಡು ಸ್ವಾವಲಂಬಿಗಳಾಗಿ ಹೆತ್ತ ತಂದೆ ತಾಯಿಗಳನ್ನು ನೋಡಿಕೊಳ್ಳಬೇಕು. ಉದ್ಯೋಗ ಮೇಳ ಒಂದು ವರ್ಷಕ್ಕೆ ಸೀಮಿತವಾಗದೆ ಪ್ರತಿ ವರ್ಷ ಆಯೋಜನೆ ಮಾಡಿದರೆ ನಿರುದ್ಯೋಗ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಸಂಸ್ಥೆಯ ಜೊತೆ ನಾನು ಸಹಕಾರ ನೀಡುತ್ತೇನೆ ಎಂದರು. ತಿಪಟೂರು ಶೈಕ್ಷಣಿಕ ನಗರವಾಗಿದ್ದು ಇಂಜಿನಿಯರಿಂಗ್, ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಿದ್ದು ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಚಿಂತನೆ ಇದ್ದು ಈ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರಾಮಕೃಷ್ಣರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಸಾಧಿಸುವ ಛಲ, ದೃಢ ಸಂಕಲ್ಪವಿದ್ದರೆ ಸಾಧನೆ ಸುಲಭವಾಗಲಿದೆ. ಮೂರು ವರ್ಷಗಳ ಕಾಲ ಶ್ರಮಪಟ್ಟರೆ ಜೀವನಪೂರ್ತಿ ನೆಮ್ಮದಿಯಿಂದಿರಬಹುದು. ಸರ್ಕಾರ ಮತ್ತು ಈ ಸಂಸ್ಥೆ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದ್ದು ಅದನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆ, ಯೋಚಿಸುವ ಗುಣ, ಕೌಶಲ್ಯವಿದ್ದರೆ ಉದ್ಯೋಗ ನಿಮ್ಮನ್ನೇ ಹುಡುಕಿಕೊಂಡು ಬರಲಿದೆ. ಆದ್ದರಿಂದ ಕಷ್ಟಪಟ್ಟು ಓದಿ ಉದ್ಯೋಗಿಗಳಾಗಿ ನೆಮ್ಮದಿಯಿಂದ ಜೀವನ ನಡೆಸಿ ಎಂದರು. ಕೆವಿಎಸ್ ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ, ಮಹನೀಯರ ಪರಿಶ್ರಮದಿಂದ ನಮ್ಮ ಸಂಸ್ಥೆ ಹೆಮ್ಮರವಾಗಿ ಬೆಳೆದಿದ್ದು ಇಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕೊಟ್ಟರಷ್ಟೇ ಸಾಲದು ಉದ್ಯೋಗವಕಾಶ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಸಂಸ್ಥೆಯು ಪ್ರಥಮ ಬಾರಿಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.ಅಧ್ಯಕ್ಷತೆಯನ್ನು ಕೆವಿಎಸ್ ಉಪಾಧ್ಯಕ್ಷ ಜಿ.ಪಿ. ದೀಪಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಿಟಿ ಮ್ಯಾನೇಜರ್ ಕರ್ಪಗಮ್ ಪ್ರಕಾಶ್, ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ್ ಪಮ್ಮಾರ್, ಕಾರ್ಯಕ್ರಮ ವ್ಯವಸ್ಥಾಪಕ ಅರವಿಂದ್ ಕ್ರಿಸ್ಟಿ, ಕೆವಿಎಸ್ ಉಪಾಧ್ಯಕ್ಷರಾದ ಟಿ.ಎಸ್. ಬಸವರಾಜು, ಬಾಗೆಪಲ್ಲಿ ನಟರಾಜ್, ಬಿ.ಎಸ್. ಉಮೇಶ್, ಕಾರ್ಯದರ್ಶಿಗಳಾದ ಎಚ್.ಜಿ. ಸುಧಾಕರ್, ಉಮಾಶಂಕರ್, ಎಂ.ಆರ್. ಸಂಗಮೇಶ್, ಹಿರಿಯ ಸದಸ್ಯ ನಂಜುಂಡಪ್ಪ ಸೇರಿದಂತೆ ಸಂಸ್ಥೆಯ ಎಲ್ಲಾ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.