ಸಾರಾಂಶ
ಕಾರಟಗಿ: ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಲು ಮುಂದಾಗಬೇಕು, ಸರ್ಕಾರ ಆರ್ಥಿಕ ದುರ್ಬಲಕರಿಗೆ ಸಾಕಷ್ಟು ಯೋಜನೆ ನೀಡಿದ್ದು, ಇವುಗಳ ಮೂಲಕ ಕೌಶಲ್ಯಾಭಿವೃದ್ಧಿ ಯೋಜನೆ ಕಲಿತು ಸ್ವಂತ ಉದ್ಯೋಗ ಕೈಗೊಂಡು ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಹೇಳಿದರು.
ಪಟ್ಟಣದಲ್ಲಿ ಪುರಸಭೆಯಿಂದ ೨೦೨೫-೨೬ ನೇ ಸಾಲಿನ ಎಸ್.ಫ್.ಸಿ.ಯೋಜನೆಯಲ್ಲಿ ಬರುವ ಶೇ. ೨೪.೧೦ ಹಾಗೂ ೭.೨೫% ರಲ್ಲಿ ಎಸ್ಸಿ-೨೭, ಎಸ್ಟಿ-೧೩ ಹಾಗೂಹಿಂದುಳಿದ ವರ್ಗ-೭ ಜನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಗುರುವಾರ ವಿತರಣೆ ಮಾತನಾಡಿದರು.ಬಡತನ,ನಿರುದ್ಯೋಗ,ಶಿಕ್ಷಣದ ಕೊರತೆ ಸೇರಿದಂತೆ ಇನ್ನಿತರೆ ಕಾರಣಗಳಿಂದ ಅನೇಕ ಮಹಿಳೆಯರು ಹಾಗೂ ಬಡವರು ಜೀವನ ಸಾಗಿಸಲು ಕಷ್ಟಪಡುತ್ತಾರೆ.ಇಂತಹವರಿಗೆ ಸಣ್ಣ ಮಟ್ಟದ ಉದ್ಯಮ ಪ್ರಾರಂಭಿಸಲು ಹೊಲಿಗೆ ಯಂತ್ರ ಉಚಿತವಾಗಿ ಸರ್ಕಾರದಿಂದ ನೀಡಲಾಗುತ್ತದೆ.
ಕೇವಲ ಹೊಲಿಗೆ ಯಂತ್ರ ವಿತರಣೆ ಮಾತ್ರವಲ್ಲ ಬಡಕುಟುಂಬದ ಭವಿಷ್ಯ ಕಟ್ಟಿಕೊಡುವ ಹೆಜ್ಜೆ. ಹೊಲಿಗೆ ಯಂತ್ರ ದೊರಕಿದರೆ ಗೃಹಿಣಿಯರು ಮನೆಯಲ್ಲೇ ಕುಳಿತು ಹಣ ಸಂಪಾದಿಸಬಹುದು. ಸಣ್ಣದುಡಿಮೆಯಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಾರೆ. ಮಹಿಳೆಯರು ಸ್ವಂತವಾಗಿ ಹಣ ಗಳಿಸಲು ಪ್ರಾರಂಭಿಸಿದರೆ ಕುಟುಂಬದಲ್ಲಿ ಗೌರವ ಹೆಚ್ಚುತ್ತದೆ. ಆತ್ಮ ವಿಶ್ವಾಸ ಮೂಡುತ್ತದೆ. ಬದುಕಿನಲ್ಲಿ ಹೊಸ ದಾರಿ ತೆರೆದು ಕೊಡುವುದು ಸರ್ಕಾರದ ಉದ್ದೇಶ. ಸಮಾಜದಲ್ಲಿ ಸಮಾನತೆ ಮತ್ತು ಆರ್ಥಿಕ ಭದ್ರತೆ ಮೂಡಿಸಲು ಈ ಯೋಜನೆ ಬಹಳ ಮುಖ್ಯ ಎಂದರು.ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಈಶಪ್ಪ ಮಾತನಾಡಿ, ಹೊಲಿಗೆ ಯಂತ್ರ ಪಡೆಯಲು ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿನ ಮಹಿಳೆಯರಿಗೆ ಆದ್ಯತೆ ಇರುತ್ತದೆ. ಗೃಹಿಣಿಯರು, ವಿಧವೆ ಮಹಿಳೆಯರು, ನಿರ್ಗತಿಕರು, ಸ್ವಸಹಾಯ ಸಂಘಗಳಲ್ಲಿ ಕೆಲಸ ಮಾಡುವವರು ಹಾಗೂ ಉದ್ಯೋಗವಕಾಶವಿಲ್ಲದೆ ಕಷ್ಟಪಡುವ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಹಾಗೆಯೇ ಅಂಗವಿಕಲರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗದ ಫಲಾನುಭವಿಗೂ ಮೀಸಲಾತಿ ಇದೆ ಎಂದರು.
ಈ ವೇಳೆ ಉಪಾಧ್ಯಕ್ಷೆ ದ್ಯಾವಮ್ಮ ಚಲವಾದಿ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ, ಸದಸ್ಯರಾದ ಹಿರೇ ಬಸಪ್ಪ ಸಜ್ಜನ, ದೊಡ್ಡ ಬಸವರಾಜ ಬೂದಿ, ರಾಜಶೇಖರ ಶಿರಗೇರಿ, ಆನಂದ ಮೆಗಡೆಮನಿ, ಶ್ರೀನಿವಾಸ ರೆಡ್ಡಿ, ಶೇಖರಪ್ಪ ಗ್ಯಾರೇಜ, ಫಕೀರಪ್ಪ ಬಿಲ್ಗಾರ, ರಾಮಣ್ಣ ಸೇರಿದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಫಲಾನುಭವಿಗಳು ಇದ್ದರು.