ತಾಪಂ ವ್ಯಾಪ್ತಿಯ ಚಿಕ್ಕಹಂದಿಗೋಳ, ಅಡವಿಸೋಮಾಪುರ, ಬಿಂಕದಕಟ್ಟಿ, ಲಕ್ಕುಂಡಿ, ಬೆಳಹೋಡ, ತಿಮ್ಮಾಪುರ, ಹುಯಿಲಗೋಳ, ಬೆಳದಡಿ, ಹರ್ತಿ, ನೀರಲಗಿ ಸೇರಿ ವಿವಿಧ ಗ್ರಾಪಂಗಳಲ್ಲಿ ಸಮುದಾಯ ಕಾಮಗಾರಿಗಳು ಪ್ರಾರಂಭವಾಗಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಜನರು ಕೆಲಸದಲ್ಲಿ ತೊಡಗಿದ್ದಾರೆ.
ಗದಗ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕ ಬದು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಫಲವತ್ತಾದ ಮಣ್ಣು ಅದೇ ಜಮೀನಿನಲ್ಲಿಯೇ ಉಳಿಯುವುದರ ಜತೆಗೆ ಅಂತರ್ಜಲ ವೃದ್ಧಿಗೆ ಪೂರಕವಾಗಿದ್ದು, ರೈತರಿಗೆ ವರದಾನವಾಗಿದೆ.ತಾಪಂ ವ್ಯಾಪ್ತಿಯ ಚಿಕ್ಕಹಂದಿಗೋಳ, ಅಡವಿಸೋಮಾಪುರ, ಬಿಂಕದಕಟ್ಟಿ, ಲಕ್ಕುಂಡಿ, ಬೆಳಹೋಡ, ತಿಮ್ಮಾಪುರ, ಹುಯಿಲಗೋಳ, ಬೆಳದಡಿ, ಹರ್ತಿ, ನೀರಲಗಿ ಸೇರಿ ವಿವಿಧ ಗ್ರಾಪಂಗಳಲ್ಲಿ ಸಮುದಾಯ ಕಾಮಗಾರಿಗಳು ಪ್ರಾರಂಭವಾಗಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಜನರು ಕೆಲಸದಲ್ಲಿ ತೊಡಗಿದ್ದಾರೆ.
ಎರಡು ಬಾರಿ ಹಾಜರಾತಿ ಕಡ್ಡಾಯ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸಕ್ಕೆ ಬರುವ ಕೂಲಿಕಾರರ ಹಾಜರಾತಿ ಪಡೆಯಲು ಕೇಂದ್ರ ಸರ್ಕಾರ ಎನ್‌ಎಂಎಂಎಸ್(ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕುವುದು ಕಡ್ಡಾಯವಿದೆ. ಮುಖ ಚಹರೆ ಆಧಾರದ ಮೂಲಕ ಹಾಜರಾತಿಯನ್ನು ಇಂದೀಕರಿಸಿ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ.ಸಮಾನ ಕೂಲಿ: ಎನ್‌ಆರ್‌ಇಜಿಎ ಯೋಜನೆಯಡಿ ಮಹಿಳೆ, ಪುರುಷ ಎಂಬ ಭೇದವಿಲ್ಲದೆ ಎಲ್ಲರಿಗೂ ದಿನಕ್ಕೆ ₹370 ಕೂಲಿ ಹಣ ನೀಡಲಾಗುತ್ತದೆ. ಸರಿಯಾದ ಅಳತೆಯಲ್ಲಿ ಕಂದಕ ಬದು ನಿರ್ಮಾಣ ಮಾಡಿದಾಗ ಮಾತ್ರ ಪೂರ್ಣ ಪ್ರಮಾಣದ ಕೂಲಿ ಹಣ ದೊರೆಯಲಿದೆ. ನೇರವಾಗಿ ಕೂಲಿಕಾರರ ಉಳಿತಾಯ ಖಾತೆಗೆ ಪಾವತಿಯಾಗಲಿದೆ.
ತಮ್ಮದೇ ಕುಟುಂಬ ಸದಸ್ಯರು ಕೂಡಿಕೊಂಡು ಕೆಲಸ ಮಾಡಿ ಹಣ ಪಡೆಯಬಹದಾಗಿದೆ. ಇದರಿಂದ ಕುಟುಂಬದ ಸಣ್ಣಪುಟ್ಟ ಅಗತ್ಯತೆ, ಮಕ್ಕಳ ಮುಂದಿನ ವ್ಯಾಸಂಗಕ್ಕೆ, ಬಳಕೆ ಮಾಡಿಕೊಳ್ಳಬಹುದು. ಜತೆಗೆ ಮುಂಗಾರು ಬೆಳೆ ಬೆಳೆಯಲು ಗೊಬ್ಬರ, ಬೀಜ ಮತ್ತು ಜಮೀನಿನ ಇನ್ನಿತರ ಕೆಲಸ ಕಾರ್ಯಗಳಿಗೆ ಇದನ್ನು ಬಳಕೆ ಮಾಡಿಕೊಳ್ಳಬಹುದು.ಮಣ್ಣು ನೀರು ಸಂರಕ್ಷಣೆ: ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ. ಬದು ನಿರ್ಮಾಣದಿಂದ ಜಮೀನಿನಲ್ಲಿಯ ಮಣ್ಣು ಕೊಚ್ಚಿ ಹೋಗದೆ ಗುಂಡಿಗಳಲ್ಲಿಯೇ ಸಂಗ್ರಹವಾಗಲಿದೆ. ಮಳೆಯಾದಾಗ ಹೆಚ್ಚುವರಿ ನೀರು ಹರಿದು ಕೊಚ್ಚಿ ಹೋಗದಂತೆ ಬದುವಿನಲ್ಲಿ ಮಣ್ಣಿನ ಏರಿ ಹಾಕುವುದರಿಂದ ಫಲವತ್ತಾದ ಮಣ್ಣು ಜಮೀನಿನಲ್ಲಿಯೇ ಉಳಿಯಲಿದೆ.ಜತೆಗೆ ಅಂತರ್ಜಲ ಪ್ರಮಾಣ ವೃದ್ಧಿಯಾಗಲಿದೆ. ರೈತರು ಇದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. 10 ಅಡಿ ಉದ್ದ, 5 ಅಡಿ ಅಗಲ, 2 ಅಡಿ ಆಳದ ಕಂದಕಕ್ಕೆ ಅವಕಾಶವಿದೆ. ಪ್ರತಿ ಕಂದಕವೂ ಅಂದಾಜು 2700 ಲೀಟರ್ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿರುತ್ತವೆ.
ತಾಲೂಕಿನ ಗ್ರಾಮೀಣ ಜನರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ನೀಡಲು ಮನರೇಗಾ ಯೋಜನೆಯಡಿ ಕೆಲಸ ನೀಡಲು ಸಮುದಾಯ ಬದು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಗ್ರಾಮೀಣರು ಉದ್ಯೋಗ ಅರಿಸಿ ವಲಸೆ ಹೋಗುವುದನ್ನು ನಿಲ್ಲಿಸಿ ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಪಡೆಯಬಹುದಾಗಿದೆ.ದಿನಕ್ಕೆ ₹370 ಕೂಲಿ: ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಮಳೆಗಾಲದಲ್ಲಿ ಆಗುವ ಅನುಕೂಲಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ. ಮಣ್ಣು ಮತ್ತು ನೀರು ಸಂರಕ್ಷಣೆಗೆ ಇದು ಉತ್ತಮ ಯೋಜನೆ ಆಗಿದೆ. ಇದರಿಂದ ರೈತರ ಜಮೀನಿನ ಫಲವತ್ತತೆ ಹೆಚ್ಚಾಗುವುದರ ಜತೆಗೆ ಸಣ್ಣ, ಅತಿ ಸಣ್ಣ ರೈತರು ದಿನಕ್ಕೆ ₹370 ಕೂಲಿ ಪಡೆಯಬಹುದಾಗಿದೆ ಎಂದು ತಾಪಂ ಇಒ ಡಾ. ಎಚ್.ಎಸ್. ಜನಗಿ ತಿಳಿಸಿದರು.ಹಾಜರಾತಿ ಕಡ್ಡಾಯ: ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಗಳಲ್ಲಿ ಬದು ನಿರ್ಮಾಣ ಹಾಗೂ ಹಳ್ಳ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿದೆ. ಎನ್‌ಎಂಎಂಎಸ್ ತಂತ್ರಾಂಶದ ಮೂಲಕ ಎರಡು ಬಾರಿ ಹಾಜರಾತಿ ಹಾಕುವುದು ಕಡ್ಡಾಯವಾಗಿದೆ. ಅಳತೆಗನುಸಾರ ಕೆಲಸ ಮಾಡಿದಾಗ ಮಾತ್ರ ಪ್ರತಿ ವ್ಯಕ್ತಿಗೆ ₹370 ಸಮಾನವಾಗಿ ಕೂಲಿ ನೀಡಲಾಗುತ್ತದೆ ಎಂದು ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಕುಮಾರ ಪೂಜಾರ ತಿಳಿಸಿದರು.