ಸಾರಾಂಶ
ಮುಂಡಗೋಡ: ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಶನಿವಾರ ನಡೆದ ಉದ್ಯೋಗ ಮೇಳ ಯಶಸ್ವಿಯಾಯಿತು.
ಎಸ್‌ವಿ ರಿಕ್ರುಟೆಕ್, ಇಝಡ್‌ವೈ, ಟೋಯೋಟಾ, ಹೊಂಡಾ, ಸನ್ ಬ್ರೈ ಟ್, ಕ್ರೆಡಿಟ್ ಅಕ್ಸೆಸ್ ಗ್ರಾಮೀಣ, ಮುತ್ತೂಟ್ ಫೈನಾನ್ಸ್, ಎ ಗ್ರೇಬ್, ಹೋಮ್ ಆಶ್ರಯ, ಕ್ರೆಡಿಟ್ ಅಕ್ಸೆಸ್, ಎಲ್‌ಐಸಿ, ಪಿವಿಆರ್, ಸನ್‌ಬಿಜ್, ಡಿವಿಜಿ, ನವಭಾರತ, ಜಸ್ಟ್ ಡೈಲ್ ಮುಂತಾದ ಕಾರ್ಪೊರೇಟ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಕಾಂಕ್ಷಿ ೨೪೪ ಯುವಕ-ಯುವತಿಯರು ಉದ್ಯೋಗ ಪತ್ರ ನೀಡಲಾಯಿತು.ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಾಮಾಜಿಕ ಧುರೀಣ ಕೃಷ್ಣ ಹಿರೇಹಳ್ಳಿ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಮುಂಡಗೋಡ ತಾಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಕೇಂದ್ರವು ನೀಡಿದ ಅವಕಾಶವನ್ನು ಯುವ ಸಮೂಹ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಶನ ಯಶಸ್ವಿಗೊಳಿಸಲು ಮಾರ್ಗದರ್ಶನ, ಸಲಹೆ-ಸೂಚನೆ ಹಾಗೂ ಟಿಪ್ಸ್ ಒದಗಿಸಿದ, ಬೆಂಗಳೂರು ಮೂಲದ ಎಸ್‌ವಿ ರಿಕ್ರುಟೆಕ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಜೀವನ ಕುಮಾರ್, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಮನೋಭಾವ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಹುರಿದುಂಬಿಸಿದರು. ಐಟಿಐ, ಡಿಪ್ಲೊಮಾ, ಪಿಯುಸಿ, ಪದವಿ, ಎಂಬಿಎ., ಜಿಎನ್‌ಎಂ, ನರ್ಸಿಂಗ್, ಬಿಇ, ಹತ್ತನೇ ತರಗತಿ ಪಾಸ್-ಫೇಲ್ ಇತ್ಯಾದಿ ಅರ್ಹತೆ ಹೊಂದಿದ ೩೨೬ ಉದ್ಯೋಗಾಂಕ್ಷಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಿದ್ದರು.ಮುಂಡಗೋಡ ಎಲ್‌ವಿಕೆ ನಿರ್ದೇಶಕ ಅನಿಲ್ ಡಿ’ಸೋಜಾ ಪ್ರಾಸ್ತಾವಿಕ ಮಾತನಾಡಿ, ನಿರಂತರವಾಗಿ, ಉದ್ಯೋಗಾಂಕ್ಷಿಗಳಿಕೆ ಎಲ್‌ವಿಕೆ ನೆರವು ಮತ್ತು ಬೆಂಬಲ ನೀಡಲಿದೆ ಎಂದರು. ಹಾನಗಲ್ ಲೊಯೋಲ ವಿಕಾಸ ಕೇಂದ್ರ ಸಹ ನಿರ್ದೇಶಕ ವಿನ್ಸೆಂಟ್ ಜೆಸನ್ ಮಾತನಾಡಿ, ಯುವ ಸಮೂಹಕ್ಕೆ ಉದ್ಯೋಗದ ಭರವಸೆ ಮತ್ತು ಅವಕಾಶ ಒದಗಿಸುವುದು ಉದ್ಯೋಗ ಮೇಳದ ಆಶಯ ಎಂದರು.
ಮುಂಡಗೋಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಸಂತ ಕೊಣಸಾಲಿ, ಯುವರತ್ನ ಒಕ್ಕೂಟದ ತನ್ವೀರ್ ಮಿರ್ಜಾನಕರ, ಜನವೇದಿಕೆಯ ಬೀರು ಕಾತ್ರಟ್, ಜನಸ್ಫೂರ್ತಿ ಸ್ವಸ-ಸಹಾಯ ಸಂಘಗಳ ಒಕ್ಕೂಟದ ಸರೋಜಾ ಲಮಾಣಿ ಉಪಸ್ಥಿತರಿದ್ದರು.ಎಲ್‌ವಿಕೆಯ ಹಜರತ್ ಮತ್ತು ಸಂಗಡಿಗರು ಹೋರಾಟ ಗೀತೆ ಹಾಡಿದರು. ಮಲ್ಲಮ್ಮ ಕಾರ್ಯಕ್ರಮ ನಿರೂಪಿಸಿದರು ಮಂಗಲಾ ಸ್ವಾಗತಿಸಿದರು. ಅಂಜನಾ ಬೆಂಡಿಗೇರಿ ಸಂವಿಧಾನ ಪ್ರಸ್ತಾವನೆ ವಾಚಿಸಿದರು. ನಾಗರಾಜ ವಂದಿಸಿದರು.