ಸಾರಾಂಶ
ಕೃಷ್ಣೆಗೌಡರ ಮುಂದಿನ ನಿಲುವು ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಅರಕಲಗೂಡು ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅಭಿಪ್ರಾಯ ಸಭೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಮಾತನಾಡಿದರು.
ನಾನು ಯಾವ ರಾಜಕಾರಣಿ ಮನೆ ಬಾಗಿಲಿಗೂ ಹೋಗಿಲ್ಲ, ಹೋಗುವುದೂ ಇಲ್ಲ
ಕನ್ನಡಪ್ರಭ ವಾರ್ತೆ ಅರಕಲಗೂಡು‘ನಾನು ಲಾಭಕ್ಕಾಗಿ ರಾಜಕೀಯಕ್ಕೆ ಬಂದವನಲ್ಲ. ತಾಲೂಕಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಅದೇ ನನ್ನ ಮುಖ್ಯ ಗುರಿಯಾಗಿದೆ’ ಎಂದು ಕಳೆದ ವಿಧಾನಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಹೇಳಿದರು.
ಕೃಷ್ಣೆಗೌಡರ ಮುಂದಿನ ನಿಲುವು ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅಭಿಪ್ರಾಯ ಸಭೆಯಲ್ಲಿ ಮಾತನಾಡಿ, ‘ನಾವು ಯಾವ ಪಕ್ಷದ ಕಡೆಗೆ ಹೋಗಬೇಕು ಎಂದು ನಿರ್ಧರಿಸಿಲ್ಲ. ಕೆಲವು ದಿನಗಳ ಹಿಂದೆ ಸಿಎಂ, ಡಿಸಿಎಂ ಅವರು ಕರೆ ಮಾಡಿ ನಮ್ಮನ್ನು ಭೇಟಿಯಾಗುವಂತೆ ತಿಳಿಸಿದರು. ಆದರೆ ಆಗಲಿಲ್ಲ. ಅಲ್ಲಿಂದ ಬಂದು ಕೆಪಿಸಿಸಿ ಕಚೇರಿಗೆ ಹೋದಾಗ 5-6 ಸಾವಿರ ಜನರಿದ್ದರು. ಆಗ ಅಲ್ಲಿಂದ ಹಿಂತಿರುಗಿ ಬಂದೆ. ತಾಲೂಕಿನಲ್ಲಿರುವ ಸಮಸ್ಯೆ ಬಗೆಹರಿಸಲು ಬಂದಿದ್ದೇನೆಯೇ ಹೊರತು ಯಾವ ರಾಜಕಾರಣಿ ಮನೆ ಮುಂದೆ ಹೋಗಿ ನನಗೆ ಅಧಿಕಾರ ನೀಡುವಂತೆ ಕೇಳಿಲ್ಲ. ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ’ ಎಂದು ಹೇಳಿದರು.‘ಇಂದು ಕೆಲವು ಕಡೆಗಳಲ್ಲಿ 700 ಅಡಿ ಬೋರ್ವೆಲ್ ಕೊರೆಸಿದರೂ ನೀರು ಬರುತ್ತಿಲ್ಲ. ಆದರೆ, ನಾನು 7 ಕೆರೆಗಳನ್ನು ಕಟ್ಟಿದ್ದು ಎಲ್ಲಿ ಬೋರ್ವೆಲ್ ಕೊರೆಸಿದರೂ 350 ಅಡಿ ನೀರು ಬರುತ್ತದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಿದೆ’ ಎಂದರು.
ತಾಲೂಕಿನ ಸಾವಿರಾರು ಯುವಕರು ಉದ್ಯೋಗಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಯ ಜತೆಗೆ ಹಾಲು ಉತ್ಪಾದನ ಕೇಂದ್ರ ತೆರೆದಿದ್ದೇನೆ. ತಾಲೂಕಲ್ಲೇ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂಬ ಉದ್ದೇಶವಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಮುಂದಿನ ನಡೆಯ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದಿದ್ದು, ಅದರಂತೆ ನಡೆದುಕೊಳ್ಳುತ್ತೇನೆ ಎಂದು ತಮ್ಮ ಮುಂದಿನ ನಡೆ ಗೌಪ್ಯವಾಗಿರಿಸಿದರು.‘ನಾನು ಬೇರೆಯವರಂತೆ ಹಣಬರುತ್ತದೆ, ರಾಜಕೀಯ ಮಾಡೋಣ ಎಂದು ಬಂದವನಲ್ಲ. ನಾವು ಗಳಿಸಿದ ಹಣದಿಂದಲೇ ಕೆಲಸ ಮಾಡಿಕೊಂಡು ಬಂದಿದ್ದೇನೆ. ನಿಮ್ಮ ಸೇವೆ ಬಿಟ್ಟರೆ ಬೇರೆ ಆಸೆಯಿಲ್ಲ. ತಾಲೂಕು ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ’ ಎಂದರು.
‘ನಾನು ಕಚೇರಿ ಮುಚ್ಚಿಕೊಂಡು ಹೋಗಿಲ್ಲ. ನನಗಿರುವುದು ಒಂದೇ ಮನೆ. ನಾನು ನಿಮ್ಮೊಂದಿಗೆ ಇರುತ್ತೇನೆ. ಏನೇ ಕಷ್ಟ, ಸುಖವಿದ್ದರೂ ತಿಳಿಸಬೇಕು’ ಎಂದು ಮನವಿ ಮಾಡಿದರು.ಈ ವೇಳೆ ಹಲವಾರು ಮುಖಂಡರು ಮಾತನಾಡಿದರು. ಮುಖಂಡರಾದ ರವಿಕುಮಾರ್, ಬಿಳಿಗುಲಿ ರಾಮೇಗೌಡ, ಆಸಿಮ್, ರಾಜೇಗೌಡ, ವೆಂಕಟೇಶ್, ಕಾಂತರಾಜ್, ಹೇಮಂತ್ ಕುಮಾರ್ ಇದ್ದರು.
ಅರಕಲಗೂಡಲ್ಲಿ ಆಯೋಜಿಸಿದ್ದ ಬೆಂಬಲಿಗರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಎಂ.ಟಿ.ಕೃಷ್ಣೇಗೌಡ.