ಸಂವಿಧಾನ ಉಳಿವಿಗೆ ಕಾಂಗ್ರೆಸ್‌ಗೆ ಅಧಿಕಾರ ಕೊಡಿ: ಕೆ.ಎಂ.ರಾಮಚಂದ್ರಪ್ಪ

| Published : Apr 07 2024, 01:51 AM IST

ಸಂವಿಧಾನ ಉಳಿವಿಗೆ ಕಾಂಗ್ರೆಸ್‌ಗೆ ಅಧಿಕಾರ ಕೊಡಿ: ಕೆ.ಎಂ.ರಾಮಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾಗಿ ಉಳಿದಿಲ್ಲ. ದೇವೇಗೌಡರ ಕುಟುಂಬದ ರಾಜಕೀಯ ಆಸ್ತಿಯಾಗಿ ಪರಿವರ್ತನೆಗೊಂಡಿದೆ. ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಜತ್ಯಾತೀತ ಪದವನ್ನು ತೆಗೆಯಬೇಕಾದ ಅಗತ್ಯತೆ ಇದೆ. ಜಿಲ್ಲೆಯ ಪ್ರಜ್ಞಾವಂತ ಮತದಾರರು ಜೆಡಿಎಸ್‌ನ ಅವಕಾಶವಾದಿ ಮನಸ್ಥಿತಿಗೆ ತಕ್ಕ ಉತ್ತರ ನೀಡಬೇಕು

ಮಂಡ್ಯ: ಶೋಷಿತ ಸಮುದಾಯಗಳ ಆಧಾರ ಸ್ಥಂಭವಾಗಿರುವ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ಅನಿವಾರ್ಯ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಹೇಳಿದರು.

ನಗರದ ಕನಕ ಭವನದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಂಯುಕ್ತವಾಗಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ರಾಜಕೀಯ ನಿರ್ಣಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಮಾರಸ್ವಾಮಿ ಅವರಂತೆಯೇ ಕಾಂಗ್ರೆಸ್‌ನ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಜಿಲ್ಲೆಯ ಜನತೆ ಸ್ವಾಭಿಮಾನದ ಘನತೆಯನ್ನು ಉಳಿಸುವ ಸಲುವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾಗಿ ಉಳಿದಿಲ್ಲ. ದೇವೇಗೌಡರ ಕುಟುಂಬದ ರಾಜಕೀಯ ಆಸ್ತಿಯಾಗಿ ಪರಿವರ್ತನೆಗೊಂಡಿದೆ. ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಜತ್ಯಾತೀತ ಪದವನ್ನು ತೆಗೆಯಬೇಕಾದ ಅಗತ್ಯತೆ ಇದೆ. ಜಿಲ್ಲೆಯ ಪ್ರಜ್ಞಾವಂತ ಮತದಾರರು ಜೆಡಿಎಸ್‌ನ ಅವಕಾಶವಾದಿ ಮನಸ್ಥಿತಿಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಈ ಚುನಾವಣೆ ಮಹತ್ವದ್ದಾಗಿದೆ. ದೇಶದ ಭವಿಷ್ಯ ನಿರ್ಧರಿಸುವಂತಾಗಿದೆ. ಆರ್‌ಎಸ್‌ಎಸ್. ಹಾಗೂ ಸಂಘ ಪರಿವಾರ ದುಷ್ಟಕೂಟ ಭಾರತದಲ್ಲಿ ತನ್ನ ಕಾರ್ಯತಂತ್ರ ರೂಪಿಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ 400 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದು ಯಾವ ಆಧಾರದ ಮೇಲೆ ಗೆಲ್ಲುತ್ತಾರೆ ಎನ್ನುವುದನ್ನು ಶೋಷಿತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇತರೆ ಪಕ್ಷದಲ್ಲಿರುವ ಅಹಿಂದ ಮುಖಂಡರೂ ಕೂಡ ದೇಶದ ಉಳಿವಿಗಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು..

ಸಂಚಾಲಕ ಎನ್. ಅನಂತನಾಯ್ಕ, ಸಂಚಾಲನ ಸಮಿತಿ ಸದಸ್ಯ ಗುರುಪ್ರಸಾದ್ ಕೆರಗೋಡು, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ಕೆ.ಎಚ್. ನಾಗರಾಜು, ಎಲ್.ಸಂದೇಶ್, ಮಂಡ್ಯ ಜಿಲ್ಲೆಯ ಮುಖಂಡರಾದ ನಾಗೇಂದ್ರ ಕುಮಾರ್, ಅಮ್ಜದ್ ಪಾಷಾ, ಮುಜಾಯಿದ್, ಸತೀಶ್, ಪುಟ್ಟಸ್ವಾಮಿ, ಜೆಬಿ,ಬಸವರಾಜು, ನಾಗರತ್ನ, ಚಂದ್ರಶೇಖರ್, ಕೃಷ್ಣ, ಸೇರಿ ಇತರರು ಭಾಗವಹಿಸಿದ್ದರು.