ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಜತೆಗೆ ಸಾಮಾಜಿಕವಾಗಿ ಸಬಲರಾಗಬೇಕು

ಕೊಪ್ಪಳ: ವಿಶ್ವಕರ್ಮ ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಶಿಕ್ಷಣ ಮತ್ತು ಸಂಘಟನೆಯ ಬಲ ಅತ್ಯಗತ್ಯವಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಶಿವಶಾಂತ ಮಂಗಲ ಭವನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಏಳು ತಾಲೂಕುಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದ ಕೀರ್ತಿ ಹೆಚ್ಚಿಸಬೇಕು. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಜತೆಗೆ ಸಾಮಾಜಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ವಿಶ್ವಕರ್ಮ ಸಮಾಜ ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಇದೇ ಒಗ್ಗಟ್ಟನ್ನು ಮುಂದುವರಿಸಿಕೊಂಡು ಹೋದರೆ ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ. ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ಮನೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಮಾತನಾಡಿ, ವಿಶ್ವಕರ್ಮ ಸಮಾಜದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಮತ್ತು ವಿಶೇಷ ಯೋಜನೆಗಳ ಅಗತ್ಯವಿದೆ. ಸಮಾಜದ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತಿಂಥಿಣಿ ಸೇತುವೆಯಿಂದ ವಿಧಾನಸೌಧದವರೆಗೆ 25 ದಿನಗಳ ಪಾದಯಾತ್ರೆ ನಡೆಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ದೇವಾಲಯಗಳ ನಿರ್ಮಾಣ, ಶಿಲ್ಪಕಲೆ, ವಿಗ್ರಹಗಳ ನಿರ್ಮಾಣ ಹಾಗೂ ಆಭರಣ ತಯಾರಿಕೆ ಸೇರಿದಂತೆ ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ. ಹಂಪಿಯ ವೈಭವ ನಿರ್ಮಾಣದಲ್ಲಿಯೂ ವಿಶ್ವಕರ್ಮರ ಪಾತ್ರ ಮಹತ್ವದ್ದಾಗಿದ್ದರೂ ರಾಜ್ಯದ ಪ್ರಮುಖ ಉತ್ಸವಗಳಲ್ಲಿ ಸಮಾಜಕ್ಕೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಶ್ವಕರ್ಮ ಸಮಾಜಕ್ಕೆ ಶೈಕ್ಷಣಿಕ ಮೀಸಲಾತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಅವರು, ಸಮಾಜದ ಹಕ್ಕುಗಳಿಗಾಗಿ ಹೋರಾಟ ನಿರಂತರವಾಗಿ ಮುಂದುವರಿಸಲಾಗುವುದು ಎಂದರು.

ಸನ್ಮಾನ: ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಏಳು ತಾಲೂಕುಗಳ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿ ಸಂಘಟನೆಯ ಬಲವರ್ಧನೆ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸಮಾಜದ ಗುರುಗಳಾದ ಶೇಷಪ್ಪಯ್ಯ ಸ್ವಾಮಿ, ನಾಗಮೂರ್ತಿ ಸ್ವಾಮಿ, ಗುರುನಾಥ ಸ್ವಾಮಿ, ನಾಗಲಿಂಗ ಸ್ವಾಮಿ ಹಾಗೂ ಸೂರ್ಯನಾರಾಯಣ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ನಾಗಲಿಂಗಪ್ಪ ಪತ್ತಾರ, ವೀರಣ್ಣ ಪತ್ತಾರ, ದೇವೇಂದ್ರಪ್ಪ ಬಡಿಗೇರ, ವಿರೇಶ ವಿಶ್ವಕರ್ಮ, ಶ್ರೀನಿವಾಸ ಪಂಡಿತ್, ಅಮರೇಶ ಪತ್ತಾರ, ದೇವೇಂದ್ರ ವಿಶ್ವಕರ್ಮ, ಗುರುಮೂರ್ತಿ ಬಡಿಗೇರ, ಆಂಜಿನೇಯ ವಿಶ್ವಕರ್ಮ, ಮಹಾಂತೇಶ ವಿಶ್ವಕರ್ಮ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.