ಮಹಿಳೆಯರ ಸಬಲೀಕರಣ ರಾಷ್ಟ್ರಾಭಿವೃದ್ಧಿಗೆ ಪೂರಕ: ದುಂಡಪ್ಪ ತುರಾದಿ

| Published : Mar 13 2024, 02:02 AM IST

ಸಾರಾಂಶ

ಮಹಿಳೆಯರ ಸಬಲೀಕರಣ ರಾಷ್ಟ್ರಾಭಿವೃದ್ಧಿಗೆ ಪೂರಕವಾಗಿದೆ.

ತಾಲೂಕು ಪಂಚಾಯಿತಿ ಇಒ ಹೇಳಿಕೆ । ವಿಶ್ವ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಿಳೆಯರ ಸಬಲೀಕರಣ ರಾಷ್ಟ್ರಾಭಿವೃದ್ಧಿಗೆ ಪೂರಕವಾಗಿದೆ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.

ನಗರದ ತಾಲೂಕು ಪಂಚಾಯಿತಿಯಲ್ಲಿ ತಾಪಂ ಹಾಗೂ ಎಫ್‌ಇಎಸ್‌ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿರುವುದು ದೇಶದ ಅಭಿವೃದ್ದಿಗೆ ಪೂರಕವಾಗಿದೆ. ಇಂದಿನ ಯುಗ ಸ್ಪರ್ಧಾತ್ಮಕವಾಗಿರುವುದರಿಂದ ಮಹಿಳೆಯರು ಎಲ್ಲಾ ರಂಗದಲ್ಲಿ ಭಾಗವಹಿಸಿ ಸಬಲೀಕರಣವಾಗುತ್ತಿರುವುದರಿಂದ ದೇಶ ಅಭಿವೃದ್ದಿಯತ್ತ ಮುನ್ನಡೆಯಲು ಸಾಧ್ಯವಾಗಿದೆ. ಭಾರತದ ಸಂವಿಧಾನವು ಕೂಡಾ ಮಹಿಳೆಯರಿಗೆ ಸಮಾನ ಮೀಸಲಾತಿ ಕಲ್ಪಿಸಿರುವುದರಿಂದ ಅವರ ಹಕ್ಕುಗಳನ್ನು ಎತ್ತಿ ಹಿಡಿದಿದೆ. ದೇಶ ಅಭಿವೃದ್ದಿ ಹೊಂದಿದೆ ಎಂದು ಹೇಳಬೇಕಾದರೆ ಅಲ್ಲಿ ಮಹಿಳೆಯರಿಗೆ ನೀಡಿರುವ ಹಕ್ಕುಗಳ ಆಧಾರದ ಮೇಲೆ ನಿರ್ಧಾರಿತವಾಗಿರುತ್ತದೆ. ಮಹಿಳೆಯರು ಕುಟುಂಬದ ನೊಗವನ್ನು ಹೊತ್ತು ಜವಾಬ್ದಾರಿಯಿಂದ ಹಿಂದೆ ಸರಿಯದೇ ಮುನ್ನುಗ್ಗಿ ತನ್ನ ಶಕ್ತಿ ಮೀರಿ ತನ್ನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದರು.

ನೀರು, ಮಣ್ಣು ಸಂರಕ್ಷಣೆಯ ಮಹಿಳಾ ಸಾಧಕರಿಗೆ ಸನ್ಮಾನ:

ಕೊಪ್ಪಳ ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯ ಹೊರತಟ್ನಾಳ ಗ್ರಾಮದ ಹುಲಿಗೆಮ್ಮ ಎಮ್ಮಿಯರ್‌ ಕಳೆದ 30 ವರ್ಷಗಳಲ್ಲಿ ಪತಿ ಪತ್ನಿ ಜಂಟಿಯಾಗಿ ಕೋಳೂರು, ಗುನ್ನಳ್ಳಿ, ಹೊರತಟ್ನಾಳ ಗ್ರಾಮ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ 250 ಹೆಚ್ಚು ಬಾವಿಗಳನ್ನು ತೊಡಿದ್ದಾರೆ. ಪ್ರಸಕ್ತದಲ್ಲಿ ಬಾವಿಯಲ್ಲಿನ ನೀರಿನ ಮೂಲಕ ರೈತರು ನೀರಾವರಿ ಮಾಡಿಕೊಂಡಿರುವುದು ನೀರು ಸಂರಕ್ಷಣೆಗೆ ಸಾಕ್ಷಿಯಾಗಿದ್ದಾರೆ.

ಹಲಗೇರಿ ಗ್ರಾಮದ ದ್ಯಾಮಮ್ಮ ಮೆಕ್ಕಾಳಿ ಮೂಲತಃ ವಿಶೇಷಚೇತನರಾಗಿದ್ದು ಗ್ರಾಪಂಯ ನರೇಗಾ ಕೆಲಸದಲ್ಲಿ ನಿರತರಾಗುವುದರ ಜೊತೆಗೆ ತಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಸಸಿಗಳಿಗೆ ಪ್ರತಿ ದಿನ ನಿರುಣಿಸುವ ಮೂಲಕ ಸಸಿಗಳ ಪೋಷಣೆಗೆ ಕೈ ಜೋಡಿಸಿದ್ದಾರೆ.

ಬೋಚನಹಳ್ಳಿ ಗ್ರಾಪಂಯ ಬೋಚನಹಳ್ಳಿ ಗ್ರಾಮದ ದೇವಮ್ಮ ಆವೋಜಿ ಗ್ರಾಮದ ರಸ್ತೆಯ ಬದಿಯಲ್ಲಿರುವ ಸಸಿಗಳಿಗೆ ಪತಿ, ಪತ್ನಿ ಜಂಟಿಯಾಗಿ ಅವುಗಳಿಗೆ ಪ್ರತಿ ದಿನ ಚಾಚು ತಪ್ಪದೇ ನೀರುಣಿಸುವದರ ಜೊತೆಗೆ ಜಾನುವಾರುಗಳಿಂದ ಹಾಳಾಗದಂತೆ ಪೋಷಣೆ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಶಾಲು ಹೋದಿಸಿ, ಹೂವಿನ ಹಾರ ಹಾಗು ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು. ಮಹಿಳಾ ಸಾಧಕರು ಮಣ್ಣು, ನೀರು ಸಂರಕ್ಷಣೆ ಕುರಿತು ತಮ್ಮ ಅನುಭವ ಹಂಚಿಕೊಂಡರು.

ನಂತರ ಸಾಮೂಹಿಕ ಆಸ್ತಿಗಳ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಎಫ್‌ಇಎಸ್‌ ಸಂಸ್ಥೆಯ ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ ಮಾತನಾಡಿ, ಸಾಮೂಹಿಕ ಆಸ್ತಿಗಳಾದ ಕೆರೆ, ಕುಂಟೆ, ಕಲ್ಯಾಣಿ, ಗೋಮಾಳ, ಸ್ಮಶಾನ, ಶಾಲೆ ಹಾಗೂ ಗ್ರಾಪಂ ಆಸ್ತಿಗಳ ರಕ್ಷಣೆಯಲ್ಲಿ ಮಹಿಳೆಯರು ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕೆನ್ನುವುದರ ಕುರಿತು ಮಾಹಿತಿ ನೀಡಿದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಕಾರ್ಯಕ್ರಮ ನಿರೂಪಿಸಿದರು.

ತಾಪಂ ವ್ಯವಸ್ಥಾಪಕಿ ಲಲಿತಾ ಸುರಳ, ಅನುಷ್ಠಾನ ಇಲಾಖೆಯ ತಾಂತ್ರಿಕ ಸಂಯೋಜಕಿ ಕವಿತಾ ಸಿ., ತಾಪಂ ವಿಷಯ ನಿರ್ವಾಹಕಿ ಜ್ಯೋತಿ ಕವಿತಾ ಕಳಕಾಪುರ ಸೇರಿದಂತೆ ತಾಲೂಕಿನ ಗ್ರಾಮ ಕಾಯಕ ಮಿತ್ರರು, ಮಹಿಳಾ ಕಾಯಕ ಬಂಧುಗಳು, ಸಂಜೀವಿನಿ ಯೋಜನೆಯ ಸಂಘದ ಸದಸ್ಯರು ಇದ್ದರು.