ಬಾಲಕಿ ಹಂತಕನ ಎನ್‌ಕೌಂಟರ್‌: ಸಿಐಡಿ ತನಿಖೆ

| Published : Apr 16 2025, 12:39 AM IST

ಸಾರಾಂಶ

ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಭಾನುವಾರ ಇಲ್ಲಿ ನಡೆದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ, ಹತ್ಯೆ ಮತ್ತು ನಂತರ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ನಡೆದ ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಭಾನುವಾರ ಇಲ್ಲಿ ನಡೆದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ, ಹತ್ಯೆ ಮತ್ತು ನಂತರ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ನಡೆದ ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಬಾಲಕಿ ಅಪಹರಿಸಿ ದೌರ್ಜನ್ಯವೆಸಗಿ ಕೊಲೆ ಮಾಡಿದ ಸಂಬಂಧ ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗ ಮಹಾನಗರ ಪೊಲೀಸರಿಂದ ಇಡೀ ಪ್ರಕರಣ ತನಿಖೆ ಸಿಐಡಿಗೆ ಹಸ್ತಾಂತರವಾಗಿದೆ, ಮಂಗಳವಾರ ಬೆಳಗ್ಗೆಯೇ ನಗರಕ್ಕೆ ಬಂದಿಳಿದಿರುವ ಸಿಐಡಿ ತಂಡ ತನಿಖೆ ಶುರುಮಾಡಿದೆ.

ಐದು ವರ್ಷದ ಆದ್ಯಾ ಕುರಿ ಎಂಬ ಬಾಲಕಿಯನ್ನು ಬಿಹಾರ ಪಾಟ್ನಾ ನಿವಾಸಿ ರಿತೇಶಕುಮಾರ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಿದ್ದ. ಬಾಲಕಿಯ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಇಡೀ ನಗರವೇ ಆಂತಕ ಸೃಷ್ಟಿ ಆಗಿತ್ತು. ಆರೋಪಿಯನ್ನು ಬಂಧಿಸಿದ ಪೊಲೀಸರು, ಸ್ಥಳ ಮಹಜರಿಗೆ ಹೋಗುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ್ದ. ಆ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಅನ್ನಪೂರ್ಣಾ ಹಾರಿಸಿದ ಗುಂಡಿಗೆ ಆರೋಪಿ ಬಲಿಯಾಗಿದ್ದಾನೆ. ಇದರಲ್ಲಿ ಗಾಯಗೊಂಡು ಮೂವರು ಪೊಲೀಸ್‌ ಸಿಬ್ಬಂದಿ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಿಐಡಿ ತನಿಖೆ ಏಕೆ?

ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಅಥವಾ ವ್ಯಕ್ತಿ ಸಾವಿಗೀಡಾದರೆ ಆ ಪ್ರಕರಣದ ತನಿಖೆಯನ್ನು ಸಿಐಡಿಯೇ ನಡೆಬೇಕು ಎನ್ನುವುದು ಸುಪ್ರೀಂ ಕೋರ್ಟ್‌ನ ಕಟ್ಟುಪಾಡು (ಗೈಡ್ಲೈನ್‌). ಹೀಗಾಗಿ ಎಸ್ಪಿ ವೆಂಕಟೇಶಕುಮಾರ, ಡಿವೈಎಸ್‌ಪಿ ಪುನೀತ್‌ಕುಮಾರ, ಇನ್‌ಸ್ಪೆಕ್ಟರ್ ಮಂಜುನಾಥ ಸೇರಿ ಐದಾರು ಅಧಿಕಾರಿಗಳನ್ನು ಒಳಗೊಂಡ ತಂಡವು ನಗರಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ಕಮಿಷನರ್‌ ಎನ್‌.ಶಶಿಕುಮಾರ್ ಸೇರಿ ಇತರ ಸಿಬ್ಬಂದಿ ಜತೆ ಮಾತುಕತೆ ನಡೆಸಿ ಮಾಹಿತಿ ಕಲೆ ಹಾಕಿದೆ. ಮೃತ ಬಾಲಕಿ ಮನೆಗೆ ತೆರಳಿ ತಂದೆ- ತಾಯಿಯನ್ನು ತಂಡ ಮಾತನಾಡಿಸಿದೆ. ಘಟನೆ ಹಾನೂ ಎನ್‌ಕೌಂಟರ್‌ ಮಾಡಿದ ಸ್ಥಳ ಪರಿಶೀಲಿಸಿ ಮಾಹಿತಿ ಕಲೆ ಹಾಕಿತು.