ಸಾರಾಂಶ
ಹರಪನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಆ. 30ರಂದು ಮಾಡಲಗೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಚಿಕ್ಕ ವಯಸ್ಸಿನಲ್ಲಿ ಅವರ ಕಲೆಗಳನ್ನು ಗುರುತಿಸಿ, ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಆ ಮಕ್ಕಳು ಬೆಳೆಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿದ್ದಾರೆ.
ಹರಪನಹಳ್ಳಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣದ ಜತೆಗೆ ಅವರ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿದ್ದಾರೆ.
ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಮಾಡಲಗೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಾ ಕಾರಂಜಿ ಎಂದರೆ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಸೂಕ್ತ ವೇದಿಕೆ ಮೊದಲು ಶಾಲೆಗಳಲ್ಲಿ ನಡೆಯುತ್ತಾ ಇರಲಿಲ್ಲ. ಎಲ್ಲೊ ಪಟ್ಟಣ ಪ್ರದೇಶದಲ್ಲಿ ನಡೆಯುತ್ತಿದ್ದವು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಚಿಕ್ಕ ವಯಸ್ಸಿನಲ್ಲಿ ಅವರ ಕಲೆಗಳನ್ನು ಗುರುತಿಸಿ, ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಆ ಮಕ್ಕಳು ಬೆಳೆಯುತ್ತಾರೆ ಎಂದರು.ಮಗುವಿನ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಅವರ ಕಲೆಗಳನ್ನು ಪ್ರೋತ್ಸಾಹಿಸಬೇಕು, ಆಟೋಟ ಆಡಿಸಬೇಕು, ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎಂದು ಸರ್ವ ಶಿಕ್ಷಣ ಅಭಿಯಾನ ಜಾರಿಗೆ ತರಲಾಯಿತು ಎಂದು ಹೇಳಿದರು.
ತೀರ್ಪುಗಾರರು ತಪ್ಪುಗಳನ್ನು ಎಸಗದೆ ನ್ಯಾಯಸಮ್ಮತವಾದ ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು. ಗ್ರಾಮಸ್ಥರ ಸಹಕಾರದಿಂದ ಹಬ್ಬದ ವಾತಾವರಣ ಗ್ರಾಮದಲ್ಲಿ ಮೂಡಿದೆ. ಗ್ರಾಮಸ್ಥರ ಸಹಕಾರವಿದ್ದರೆ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ನೌಕರರ ಸಂಘದ ಅಧ್ಯಕ್ಷ ಎಸ್. ರಾಮಪ್ಪ ಮಾತನಾಡಿದರು. ಸಿಆರ್‌ಪಿ ವೀರಭದ್ರಪ್ಪ ಬಳ್ಳೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ. ನಾಗರಾಜ, ಶಿಕ್ಷಣ ಸಂಯೋಜಕಿ ಲಕ್ಷ್ಮಿರಂಗಣ್ಣನವರ್, ಶಿಕ್ಷಕರ ಸಂಘದ ಅಧ್ಯಕ್ಷ ಬಿ. ರಾಜಶೇಖರ, ಕಾರ್ಯದರ್ಶಿ ನಟರಾಜ, ಖಜಾಂಚಿ ಕೊಟ್ರೇಶ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಿ. ಚಂದ್ರಮೌಳಿ, ನೌಕರರ ಸಂಘದ ನಿರ್ದೇಶಕ ಸಿ. ಗಂಗಾಧರ, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಚಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬರ್ಮಪ್ಪ, ಮುಖ್ಯ ಶಿಕ್ಷಕರಾದ ಹನುಮಂತಪ್ಪ, ರಾಮಣ್ಣ, ಮಹಾಲಕ್ಷ್ಮಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಅರ್ಜುನ ಮುನ್ನೀಸ್, ಮಹದೇವಕ್ಕ, ಎಂ. ರಮೇಶ, ಕಾಟಿ ಹನುಮಂತಪ್ಪ, ಎಎಸ್‌ಐ ನಿಂಗಪ್ಪ, ಗೌಡ್ರ ಹೊನ್ನಪ್ಪ, ಬಿಆರ್‌ಪಿ ಚೆನ್ನಪ್ಪ ಕಂಬಳಿ, ಸುಬ್ಬಣ್ಣ ಇತರರು ಹಾಜರಿದ್ದರು.