ಸಾರಾಂಶ
ಪ್ರತಿ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಆ ಮಗುವಿನಲ್ಲಿರುವ ಸಹಜ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಮಾತ್ರ ಮಗುವಿನಲ್ಲಿರುವ ಕಲೆ, ಸಾಹಿತ್ಯ, ಕ್ರೀಡೆ ಮತ್ತಿತರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ.
ಚಿಗುರು ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ
ಕನ್ನಡಪ್ರಭ ವಾರ್ತೆ ಸಿರುಗುಪ್ಪಪ್ರತಿ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಆ ಮಗುವಿನಲ್ಲಿರುವ ಸಹಜ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಮಾತ್ರ ಮಗುವಿನಲ್ಲಿರುವ ಕಲೆ, ಸಾಹಿತ್ಯ, ಕ್ರೀಡೆ ಮತ್ತಿತರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ತಿಳಿಸಿದರು.
ನಗರದ ಯಲ್ಲಮ್ಮದೇವಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶನಿವಾರ ನಡೆದ ಚಿಗುರು ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳನ್ನು ಪಠ್ಯಕ್ಕೆ ಸೀಮಿತಗೊಳಿಸಬಾರದು. ಅವರಲ್ಲಿರುವ ಪಾಂಡಿತ್ಯವನ್ನು ಗುರುತಿಸುವ ಉದ್ದೇಶದಿಂದಾಗಿಯೇ ಇಲಾಖೆಯಿಂದ ಚಿಗುರು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಪ್ರತಿಭಾನ್ವೇಷಣೆ ಕಾರ್ಯಕ್ರಮದಿಂದ ಜಿಲ್ಲೆಯ ನಾನಾ ಭಾಗಗಳಲ್ಲಿರುವ ವಿದ್ಯಾರ್ಥಿಗಳಲ್ಲಿರುವ ಕ್ಷಮತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಸಿದೆ. ರಾಜ್ಯ ಸರ್ಕಾರ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಸಾಹಿತಿ ಕುರುವಳ್ಳಿ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳಿಗೆ ನಾನಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವುದಲ್ಲದೆ, ಮಕ್ಕಳು ಬಾಲ್ಯದಲ್ಲಿಯೇ ಟಿವಿ, ಮೊಬೈಲ್ ಹಾವಳಿಯಿಂದ ದೂರ ಇರಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೃತ್ಯ ತರಬೇತುದಾರ ಅಭಿಷೇಕ, ಸಾಹಿತಿ ಬಿ.ಹರೀಶ ಹಾಗೂ ವೈ.ಡಿ. ವೆಂಕಟೇಶ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಬಳಿಕ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀರ ಪಂಚಾಕ್ಷರಿ ಅವರಿಂದ ಕೊಳಲು ವಾದನ,
ಗೌರಿ ಸೃಜನ ತಂಡದಿಂದ ಸುಗಮ ಸಂಗೀತ, ಸೂರ್ಯ ಕಲಾ ಟ್ರಸ್ಟ್ ಕಲಾವಿದರಿಂದ ಸಾಮೂಹಿಕ ನೃತ್ಯ, ಬಿ.ಸನ್ನಿಧಿ ಜಿ.ಎಂ. ತಂಡದಿಂದ ಜಾನಪದ ಗೀತೆಗಳ ಗಾಯನ, ಬಿ.ನವ್ಯಾ ಅವರಿಂದ ಏಕಪಾತ್ರಾಭಿನಯ, ಜೆ.ಎಸ್. ಸಾಹಿತ್ಯ ಮತ್ತು ಸಂಗಡಿಗರಿಂದ ಮೊಬೈಲ್ ಲೋಕ ನಾಟಕ ಪ್ರದರ್ಶನ ಜರುಗಿದವು.