ವರದಕ್ಷಿಣೆ ಮುಕ್ತ ಮದುವೆಗಳನ್ನು ಪ್ರೋತ್ಸಾಹಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವುದರ ಮೂಲಕ, ಸಮಾಜದಲ್ಲಿ ಮಹಿಳೆಯರ ಘನತೆ, ಗೌರವ ಮತ್ತು ಸ್ವಾತಂತ್ರ‍್ಯ ರಕ್ಷಣೆ ಮಾಡಬೇಕು.

ವರದಕ್ಷಿಣೆ ನಿಷೇಧ ಕಾಯ್ದೆಯ ಕುರಿತು ತರಬೇತಿ, ಅರಿವು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕಾರವಾರ

ವರದಕ್ಷಿಣೆ ಮುಕ್ತ ಮದುವೆಗಳನ್ನು ಪ್ರೋತ್ಸಾಹಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವುದರ ಮೂಲಕ, ಸಮಾಜದಲ್ಲಿ ಮಹಿಳೆಯರ ಘನತೆ, ಗೌರವ ಮತ್ತು ಸ್ವಾತಂತ್ರ‍್ಯ ರಕ್ಷಣೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ 1961, ಹಾಗೂ ನಿಯಮಾವಳಿ 2004 ಕುರಿತು ಆಯೋಜಿಸಿದ್ದ ತರಬೇತಿ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಎಷ್ಟೇ ಮುಂದುವರೆದಿದ್ದರೂ ವರದಕ್ಷಿಣೆ ಪಿಡುಗುಗಳು ಮಾತ್ರ ಹಾಗೆಯೆ ಉಳಿದಿದೆ. ಇದು ಮಹಿಳೆಯರ ವಿರುದ್ಧದ ಹಿಂಸಾಚಾರ, ಆರ್ಥಿಕ ಶೋಷಣೆ ಮತ್ತು ಮಾನಸಿಕ ಯಾತನೆಗೆ ಪ್ರಮುಖ ಕಾರಣವಾಗಿದೆ. ಇದನ್ನು ತಡೆಯಲು ಕಠಿಣ ಕಾನೂನುಗಳಿದ್ದರೂ ಕೂಡ ಇವುಗಳು ನಡೆಯುತ್ತಲೆ ಇದೆ. ವರದಕ್ಷಿಣೆ ಎಂದು ಕೇಳುವ ಬದಲು, ದುಬಾರಿ ಕಾರುಗಳು, ಐಷಾರಾಮಿ ಗೃಹೋಪಯೋಗಿ ವಸ್ತುಗಳು, ಮತ್ತು ಚಿನ್ನಾಭರಣಗಳನ್ನು ಹೆಣ್ಣು ಮಕ್ಕಳಿಗೆ ನೀಡುವ ಕಾಣಿಕೆ ಅಥವಾ ಗೌರವದ ಉಡುಗೊರೆ ಎಂಬ ಲೇಪನ ನೀಡಲಾಗುತ್ತಿದೆ ಎಂದರು.

ಮದುವೆ ಸಮಾರಂಭದ ಖರ್ಚು, ದುಬಾರಿ ಹೋಟೆಲ್ ಬುಕಿಂಗ್, ಆಮಂತ್ರಣ ಪತ್ರಿಕೆಗಳು ಮತ್ತು ಹನಿಮೂನ್ ಪ್ಯಾಕೇಜ್‌ಗಳನ್ನು ವಧುವಿನ ಕಡೆಯವರೇ ಪೂರ್ಣವಾಗಿ ವಹಿಸಿಕೊಳ್ಳುವ ಪದ್ಧತಿ ಹೆಚ್ಚಾಗಿದೆ. ವರದಕ್ಷಿಣೆ ತರಲಿಲ್ಲವೆಂದು ಮಹಿಳೆಯರನ್ನು ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸುವುದು, ಮಹಿಳೆಯರಿಗೆ ಬೆಂಕಿ ಹಚ್ಚುವುದು ಅಥವಾ ಆತ್ಮಹತ್ಯೆಗೆ ಪ್ರಚೋದನೆ ನೀಡುವುದು ಹೆಚ್ಚಾಗುತ್ತಿದೆ. ಮದುವೆಗಾಗಿ ಹೆಣ್ಣಿನ ಪೋಷಕರು ಸಾಲ ಮಾಡಿದ್ದು ಅದನ್ನು ತೀರಿಸಲು ಆಗದೆ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಪ್ರಕಾಶ ಹಾಲಮ್ಮನವರ ಮಾತನಾಡಿ, ವರದಕ್ಷಿಣೆ ನಿಷೇಧ ಕಾಯ್ದೆ ಕಠಿಣವಾಗಿದ್ದರೂ, ಸಮಾಜದಲ್ಲಿನ ಮರ್ಯಾದೆಯ ಭಯ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇದರ ಸ್ವರೂಪ ಬದಲಾಗಿದೆಯೇ ಹೊರತು ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಹೆಣ್ಣುಮಕ್ಕಳ ಮದುವೆಯನ್ನೇ ಒಂದು ದೊಡ್ಡ ವ್ಯಾಪಾರವನ್ನಾಗಿ ಮಾಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿರುವುದು ಹೆಚ್ಚಾಗಿದ್ದು, ವರದಕ್ಷಿಣೆ ಕಿರುಕುಳ ಮುಕ್ತ ಸಮಾಜ ನಿರ್ಮಾಣ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಜೊತೆಗೂಡಿ ನಿರಂತರವಾಗಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಮಾತನಾಡಿ, ವಿದ್ಯಾವಂತ ಸಮಾಜವಿದ್ದರೂ ಕೂಡ ಇನ್ನು ವರದಕ್ಷಿಣೆ ಪದ್ಧತಿ ನಡೆಯುತ್ತಿದೆ. ಇದರಿಂದ ಎಷ್ಟೋ ಕುಟುಂಬಗಳು ಇದರಿಂದ ನೆಮ್ಮದಿ ಕಳೆದುಕೊಂಡಿದೆ. ಹೆಣ್ಣು ಮಕ್ಕಳ ಪೋಷಕರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಹಾಗೂ ವರದಕ್ಷಿಣೆ ತರುವಂತೆ ಮಾನಸಿಕವಾಗಿ ವಧುವಿನ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ನಡೆಸುತ್ತಿರುವುದು ಕಂಡುಬರುತ್ತಿದೆ. ಹೆಣ್ಣು ಮಗು ಹುಟ್ಟಿದರೆ ಹೊರೆ ಎಂಬ ಭಾವನೆ ಸಮಾಜದಲ್ಲಿ ಬೆಳೆಯುತ್ತಿದೆ ಮತ್ತು ವರದಕ್ಷಿಣೆ ಭಯದಿಂದ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಲಿಂಗಾನುವಾತದ ವ್ಯತ್ಯಾಸ ಕಂಡು ಬರುತ್ತಿದ್ದು, ಲಿಂಗಾಧಾರಿತ ದೌರ್ಜನ್ಯವನ್ನು ತಡೆಗಟ್ಟಿ ಲಿಂಗಸಮಾನತೆಯ ಸಮಾಜವನ್ನು ಸ್ಥಾಪಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾದ್ಯ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕುಮಾರ ಎನ್. ಸಂಪನ್ಮೂಲ ವಕೀಲ ಕವಿತಾ ನಾಯ್ಕ, ಎ.ಆರ್. ಡಿಸೋಜಾ ಇದ್ದರು.