ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸ್ಥಳೀಯರಿಗೂ, ಮಹಿಳೆಯರಿಗೂ ಉದ್ಯಮಿಗಳಾಗಲು ಉತ್ತೇಜನ ಕೊಡಬೇಕು ಎಂದು ಅರ್ಥಶಾಸ್ತ್ರಜ್ಞ ಹಾಗೂ ಅಂಕಣಕಾರ ಆರ್. ಎಂ. ಚಿಂತಾಮಣಿ ಸಲಹೆ ನೀಡಿದರು.ನಗರದ ಸ್ಥಳೀಯ ರೆಸಾರ್ಟ್ ಒಂದರಲ್ಲಿ ನಡೆದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸ್ಥಾಪಿತವಾಗಿರುವ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ವಲಯ ನಿರೀಕ್ಷೆಗೂ ಮೀರಿ ಬೆಳವಣಿಗೆಯಾಗಿದೆ. ಆದರೆ ಇಲ್ಲಿ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದಾರೆ. ಇದರ ಜೊತೆಗೆ ನಮ್ಮ ಜಿಲ್ಲೆಯವರೂ ವಿಶೇಷವಾಗಿ ಮಹಿಳೆಯರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಸಂಸ್ಥೆ ಉತ್ತೇಜನ ನೀಡಬೇಕು. ಸ್ಥಳೀಯವಾಗಿ ತಯಾರಿಸಿ ಚಾಮರಾಜನಗರ ಬ್ರ್ಯಾಂಡ್ ನಲ್ಲಿ ಮಾರುಕಟ್ಟೆ ಮಾಡಬಹುದು ಎಂದರು.ಚಾಮರಾಜನಗರ ರೈಲ್ವೆ ಮ್ಯಾಪ್ ನಲ್ಲಿ ಕೊನೆಯ ನಿಲ್ದಾಣ. ತಮಿಳುನಾಡಿನ ಮೆಟ್ಟುಪಾಳಯಂವರೆಗೆ ವಿಸ್ತರಿಸಿದರೆ ಒಂದು ಮಿಸ್ಸಿಂಗ್ ಲಿಂಕ್ ಜೋಡಿಸಿದಂತೆ ಆಗುತ್ತದೆ. ಆದರೆ ರೈಲ್ವೆಯವರು ದಿಂಬಂ ಮಾರ್ಗ ಹತ್ತಾರು ಸುರಂಗಗಳನ್ನು ಕೊರೆದು ಅರಣ್ಯ ಹಾನಿಗೊಳಪಡಿಸುವ ಸರ್ವೇ ನಡೆಸಿ ವರದಿ ಕೊಟ್ಟಿದ್ದರು. ಸಾವಿರಾರು ಮರಗಳ ಹನನ, ಕಾಡು ನಾಶ, ವನ್ಯಪ್ರಾಣಿಗಳ ಸುಗಮ ಸಂಚಾರಕ್ಕೆ ಅಡ್ಡಿ ಮುಂತಾದ ಕಾರಣಗಳನ್ನು ನೀಡಿ ಅರಣ್ಯ , ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಈ ರೈಲು ಮಾರ್ಗಕ್ಕೆ ಅನುಮತಿ ನಿರಾಕರಿಸಿತು. ರೈಲು ಮಾರ್ಗ ಬೆಳೆದರೆ ಮಾತ್ರ ಕೈಗಾರಿಕಾ ಬೆಳವಣಿಗೆ ಸಾಧ್ಯ. ಕೊನೆ ಪಕ್ಷ ಈಗ ಮಾಡಲು ಉದ್ದೇಶಿಸಿರುವ ಹೆಜ್ಜಾಲ, ಮಳವಳ್ಳಿ, ಕೊಳ್ಳೇಗಾಲ ಮಾರ್ಗ ಚಾಮರಾಜನಗರ ರೈಲು ಮಾರ್ಗವಾದರೂ ಅನುಷ್ಠಾನಗೊಳ್ಳಬೇಕು ಎಂದರು.
ಉದ್ಯಮಿಗಳಿಗೆ ಕಿರುಕುಳ ನೀಡಬಾರದು:ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ವಲಯ ಸ್ಥಾಪನೆಗೊಂಡಾಗ ನಾನು ಎಫ್ ಕೆಸಿಸಿ ಅಧ್ಯಕ್ಷನಾಗಿದ್ದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೊಯಮತ್ತೂರಿಗೆ ಕರೆದೊಯ್ದು ರೋಡ್ ಶೋ ಮಾಡಿಸಿದ ಫಲ ಇಂದು ಆ ಕೈಗಾರಿಕಾ ವಲಯ ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ ಎಂದರು.
ನೂತನ ನಗರಸಭಾ ಅಧ್ಯಕ್ಷ ಸುರೇಶ್ ಕುಮಾರ್ ರನ್ನು ಗೌರವಿಸಿ, ಅವರಿಂದ ಸಂಸ್ಥೆಗೆ ಒಂದು ನಿವೇಶನದ ಭರವಸೆ ಪಡೆಯಲಾಯಿತು. ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮಾಡಿದ ಬಾಳೆಗಿಡದಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ವರ್ಷಾರನ್ನು ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಬ್ರಹಾಮ್ ಡಿ ಸಿಲ್ವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಪ್ರದಾನ ಕಾರ್ಯದರ್ಶಿ ಎನ್.ಪ್ರಸಾದ್, ಖಜಾಂಚಿ ಸಿ.ಎ. ನಾರಾಯಣ್, ಜಂಟಿ ಕಾರ್ಯದರ್ಶಿ ಎಲ್. ಸುರೇಶ್ , ಪೋಷಕರಾದ ಜಿ.ಆರ್.ಅಶ್ವತ್ಥ ನಾರಾಯಣ್, ಸಿ.ವಿ. ಶ್ರೀನಿವಾಸ ಶೆಟ್ಟಿ, ಉಪಾಧ್ಯಕ್ಷ ಬಿ.ಕೆ.ಪ್ರಕಾಶ್, ಸಂಚಾಲಕ ಪ್ರಕಾಶ್ ಇದ್ದರು.