ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರದುಂದು ವೆಚ್ಚದ ಮದುವೆಗಳನ್ನು ಬಿಟ್ಟು ಸರಳ ಮದುವೆಗಳನ್ನು ಬೆಂಬಲಿಸುವ ಅಗತ್ಯವಿದೆ. ನಾವು ಎಷ್ಟು ಖರ್ಚು ಮಾಡಿ ಮದುವೆಯಾಗುತ್ತೇವೆ ಎನ್ನುವುದಕ್ಕಿಂತ ಮದುವೆಯ ನಂತರ ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು. ನಗರದ ಬುದ್ಧ ಮಂದಿರಲ್ಲಿ ಭೀಮಸೇನೆ, ಕರ್ನಾಟಕ ಮತ್ತು ಅರಿವು ಭಾರತ ಸಂಯುಕ್ತಾಶ್ರಯದಲ್ಲಿ ಸರಳ ವಿವಾಹಿತ ದಂಪತಿಗಳ ಸಮ್ಮಿಲನ ಹಾಗೂ ಅರಿವು ಭಾರತ ಆಶಯಗೀತೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾವೂ ಸರಳವಾಗಿ ಮದುವೆಯಾಗಿದ್ದು, ಅದಕ್ಕೆ ಕೇವಲ ೧,೨೦೦ ರುಪಾಯಿ ಖರ್ಚು ಮಾಡಿದ್ದೆ ಎಂದು ತಿಳಿಸಿದರು. ಡಿಸಿ ರಚಿಸಿದ ಆಶಯಗೀತೆ
ಅರಿವು ಭಾರತ ಸಾಮಾಜಿಕ ಬದಲಾವಣೆ ತರುತ್ತಿರುವ ಸಂಸ್ಥೆಯಾಗಿದ್ದು, ಆ ಸಂಘಟನೆಯ ಜೊತೆ ಕೈಜೋಡಿಸಿ ಆಶಯಗೀತೆ ರಚಿಸಿದ್ದೇನೆ. ಅದು ಅರಿವು ಭಾರತದ ಒಟ್ಟು ಕಾರ್ಯಗಳನ್ನು, ಆಶಯಗಳನ್ನು ಜನರಿಗೆ ಮುಟ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಬುದ್ದನ ಪ್ರಥಮ ಪ್ರವಚನ ನೆನಪಿಸಿಕೊಳ್ಳಲು ಬುದ್ದಮಂದಿರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಏರ್ಪಡಿಸಿರುವುದು ವಿಶೇಷವಾಗಿದೆ. ಬುದ್ದ ನಮಗೆ ಶಾಂತಿ, ನೆಮ್ಮದಿ ಸೂತ್ರಗಳನ್ನು ಬೋಧಿಸಿದರು. ಅಂತರಜಾತಿ ಮದುವೆಗಳನ್ನು ನಾನು ಬೆಂಬಲಿಸುತ್ತೇನೆ. ನಮ್ಮ ಮನೆಗಳಲ್ಲಿ ಅನೇಕ ಅಂತರಜಾತಿ ವಿವಾಹಗಳಾಗಿದ್ದು ಅವೆರಲ್ಲರೂ ನೆಮ್ಮದಿಯಾಗಿದ್ದಾರೆ. ಆರ್ಥಿಕವಾಗಿ ಬಲಾಡ್ಯರಾದರೆ ಜಾತಿ ದೊಡ್ಡ ವಿಷಯವಾಗುವುದಿಲ್ಲ ಎಂದರು.ಸಮಾಜ ನಿಂತ ನೀರಾಗಬಾರದು
ಸಾಮಾಜಿಕ ಕಾಳಜಿಯುಳ್ಳವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುವ ಅಗತ್ಯವಿದೆ. ಸಮಾಜ ನಿಂತ ನೀರಾಗಬಾರದು, ಅದು ಹರಿಯುವ ನದಿಯಾಗಬೇಕು ಎಂದು ವಿಧಾನಪರಿಷತ್ತಿನ ಸದಸ್ಯರಾದ ಎಂ. ಎಲ್. ಅನಿಲ್ ಕುಮಾರ್ ಹೇಳಿದರು. ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಬುದ್ದನ ಪ್ರಜ್ಞೆ ಜಗತ್ತನ್ನು ಬೆಳಗಿದೆ. ಆ ಬೆಳಕು ಸಮಾಜದಲ್ಲಿನ ಲೋಪಗಳನ್ನು ತಿದ್ದುವಂತಾಗಲಿ ಎಂದರು. ೫೨ ದಂಪತಿಗಳ ಸಮ್ಮಿಲನಏಳೆಂಟು ವರ್ಷಗಳ ಹಿಂದೆ ಆಯೋಜಿಸಿದ್ದ ಸರಳ ವಿವಾಹಿತ ೫೨ ದಂಪತಿಗಳ ಸಮ್ಮಿಳನ ಕಾರ್ಯಕ್ರಮ ಇದಾಗಿದ್ದು ದಂಪತಿಗಳ ಜೊತೆ ಅವರ ಮಕ್ಕಳೂ ಭಾಗವಹಿಸುತ್ತಿರುವುದು ಹರ್ಷ ತಂದಿದೆ. ಮುಂದೆಯೂ ಅದೇ ರೀತಿ ಬೌದ್ಧ ಧರ್ಮ ಅನುಸಾರ ಸರಳ ವಿವಾಹಗಳನ್ನು ಆಯೋಜಿಸುವುದಾಗಿ ಭೀಮಸೇನೆ ರಾಜ್ಯಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ತಿಳಿಸಿದರು.ಕೋಲಾರದ ಎಸ್‌ಪಿ ನಿಖಿಲ್.ಬಿ ಸರಳ ವಿವಾಹಿತರನ್ನು ಸನ್ಮಾನಿಸಿದರು. ಶಾಂತಮ್ಮ, ಡಾ.ಎಂ.ಎ.ಚಾರಿಣಿ, ಮಮತಾ ರೆಡ್ಡಿ, ಅರಿವು ಶಿವಪ್ಪ, ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಸುಗತಪಾಲ ಬಂತೇಜಿ, ಡಿ.ಆರ್.ರಾಜಪ್ಪ, ವಾರಿಧಿ ಮಂಜುನಾಥ್ ರೆಡ್ಡಿ, ಈನೆಲ ಈಜಲ ವೆಂಕಟಾಚಲಪತಿ, ರಾಧಾಮಣಿ, ಪೂರ್ಣೇಶ್ ರಾಜು, ಮಂಜು ಕನ್ನಿಕಾ, ತಿಪ್ಪಸಂದ್ ಶ್ರೀನಿವಾಸ್, ರಾಮಂಜನಮ್ಮ, ನಾರಾಯಣಸ್ವಾಮಿ ಮತ್ತಿತರರು ಇದ್ದರು.