ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ ಎಂದು ರತ್ನಾಕರ್ ಹೊನಗೋಡ್ ತಿಳಿಸಿದರು.ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ 34ನೇ ಜೂನಿಯರ್ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದಿದ್ದ ವಿದ್ಯಾರ್ಥಿಗಳಾದ ವಂದನ ಮತ್ತು ನಿರೀಕ್ಷಾ ಇವರಿಗೆ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದಲ್ಲಿ ಆನಂದಪುರ ಗ್ರಾಪಂ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್, ಪತ್ರಿಕಾ ಬಳಗ ಸಹಯೋಗದೊಂದಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ತೋರಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶ ನಮ್ಮದಾಗಿದ್ದು ಮುಂದಿನ ದಿನಗಳಲ್ಲಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.
ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಸಾರ್ವಜನಿಕರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.ಈ ವೇಳೆ ಪ್ರಾರ್ಥನಾ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಡಿ.ಎಂ.ದೇವರಾಜ್, ಮುಖ್ಯ ಶಿಕ್ಷಕ ವಿಕಾಸ್, ದೈಹಿಕ ಶಿಕ್ಷಕ ಬಿ.ವಿ.ವಿನಯ್, ಗ್ರಾಪಂ ಉಪಾಧ್ಯಕ್ಷ ರೂಪಕಲ, ಗ್ರಾಪಂ ಸದಸ್ಯರಾದ ಗುರುರಾಜ್, ಗಜೇಂದ್ರ ಯಾದವ್, ಸಿರಿಜಾನ್, ಶಾಂತಕುಮಾರ್, ಭರ್ಮಪ್ಪ, ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಸೇರಿ ಅನೇಕರಿದ್ದರು.