ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕೌಶಲ್ಯ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂದು ಕೇಂದ್ರ ಸರ್ಕಾರದ ಎನ್‌ವಿಎಸ್ ಶಿಕ್ಷಣ ಸಚಿವಾಲಯದ ನಿವೃತ್ತ ಜಂಟಿ ಆಯುಕ್ತ ಎ.ಎನ್.ರಾಮಚಂದ್ರ ಅಡ್ಡಮನೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕೌಶಲ್ಯ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂದು ಕೇಂದ್ರ ಸರ್ಕಾರದ ಎನ್‌ವಿಎಸ್ ಶಿಕ್ಷಣ ಸಚಿವಾಲಯದ ನಿವೃತ್ತ ಜಂಟಿ ಆಯುಕ್ತ ಎ.ಎನ್.ರಾಮಚಂದ್ರ ಅಡ್ಡಮನೆ ಸಲಹೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಸಂಜೆ ಡಿಸಿಎಂಸಿ ಪ್ರೌಢ ಶಾಲೆಯ ಸಿಬಿಎಸ್‌ಇ ವಿಭಾಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳ ಸಾಮಾರ್ಥ್ಯಕ್ಕೆ ಅನುಗುಣವಾಗಿ, ಆಸಕ್ತಿ ಇರುವ ವಿಷಯದಲ್ಲಿ ಬೆಳವಣಿಗೆ ಹೊಂದಲು ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು. ನವೋದಯ ಶಾಲೆಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತಿದ್ದು ನೀಟ್, ಸಿಇಟಿ, ಜೆಇಇ ಪರೀಕ್ಷೆ ಎದುರಿಸುವ ಸಾಮಾರ್ಥ್ಯ ಬರಲಿದೆ. ಮಕ್ಕಳು ಗೊತ್ತಿಲ್ಲದ ವಿಷಯದ ಬಗ್ಗೆ ಪ್ರಶ್ನೆ ಮಾಡಿ ತಿಳಿದುಕೊಳ್ಳಬೇಕು ಎಂದರು.

ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರಾಧೀಕಾರ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಡಿಸಿಎಂಸಿ.ಶಾಲೆಯಲ್ಲಿ ಸ್ಥಾಪಕ ಕಾರ್ಯದರ್ಶಿಯಾಗಿ ಸಂಸ್ಥೆ ಬೆಳವಣಿಗೆ ಹೊಂದಲು ಕಾರಣರಾಗಿದ್ದ ದಿ.ಎಚ್.ಟಿ.ರಾಜೇಂದ್ರ ಅವರ ಆಡಳಿತದ ರೀತಿಯಲ್ಲೇ ಮುಂದುರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಇಂದಿನ ತಂತ್ರಜ್ಞಾನ ಮುಂದುವರಿದಿದ್ದು ಕಾಲಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕಾಗಿದೆ. ಡಿಸಿಎಂಸಿ ಶಾಲೆಯ ಸಿಬಿಎಸ್‌ಇ ಸ್ಟೇಟ್ ಹಾಗೂ ಕಾಲೇಜು ವಿಭಾಗದವರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಸತೀಶ್, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕಿ ಆಡುವಳ್ಳಿ ರೇವತಿ ಬಹುಮಾನ ವಿತರಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಿಬಿನಾ ಥಾಮಸ್, ಕೆ.ವಿ.ತುಷಾರ, ಏಕ್ತಾ ಅವರನ್ನು ಸನ್ಮಾನಿಸಲಾಯಿತು. ಕಳೆದ 32 ವರ್ಷದಿಂದ ಡಿಸಿಎಂಸಿ ಶಾಲೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಇತ್ತೀಚಿಗೆ ಅಗಲಿದ ದಿವಂಗತ ಎಚ್.ಟಿ.ರಾಜೇಂದ್ರ ಅವರಿಗೆ ಸಂಗೀತ, ನೃತ್ಯ ನಮನ ಸಲ್ಲಿಸಲಾಯಿತು. 1ರಿಂದ 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿಜ್ಞಾನ ವಸ್ತುಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರಥಮ, ದ್ವಿತೀಯ ಬಹುಮಾನ ನೀಡಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಶಾರದಾ ಬೋರ್ಡಿಂಗ್ ಕಮಿಟಿ ಅಧ್ಯಕ್ಷೆ ಎಂ.ಬಿ.ವನಮಾಲ, ಭದ್ರಾ ಸೌಹಾರ್ದ ಪತ್ತಿನ ಸಹಕಾರಿ ಉಪಾಧ್ಯಕ್ಷ ಬಿ.ವಿ.ಉಪೇಂದ್ರ, ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಎಸ್.ಎನ್.ಲೋಕೇಶ್, ಬಾಲಕರ ಬೋರ್ಡಿಂಗ್ ಕಾರ್ಯದರ್ಶಿ ಎಚ್.ಡಿ.ವಿನಯ,ಪ್ರಾಂಶುಪಾಲೆ ಪದ್ಮ ರಮೇಶ್, ಸ್ಟೇಟ್ ವಿಭಾಗದ ಮುಖ್ಯಸ್ಥೆ ಲೆವೀನಾ ಡಿ ರೋಸ್ಟಾ ಇದ್ದರು.