ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವಿಸಬೇಕು. ನಾವು ಅಧ್ಯಯನಶೀಲರಾಗುವ ಜತೆಗೆ ಇತರರನ್ನು ಅಧ್ಯಯನಶೀಲತೆಗೆ ಪ್ರೋತ್ಸಾಹಿಸಬೇಕು.
ಕನ್ನಡಪ್ರಭ ವಾರ್ತೆ ಕುಮಟಾ
ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಜೀವಿಸಬೇಕು. ನಾವು ಅಧ್ಯಯನಶೀಲರಾಗುವ ಜತೆಗೆ ಇತರರನ್ನು ಅಧ್ಯಯನಶೀಲತೆಗೆ ಪ್ರೋತ್ಸಾಹಿಸಬೇಕು. ಜ್ಞಾನವಂತ ವ್ಯಕ್ತಿಗಳಾಗಿ ವ್ಯಕ್ತಿತ್ವ ರೂಪಿಸಿಕೊಂಡು ಸಾಧಕರಾಗಬೇಕು ಎಂದು ಕವಿವಿ ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ವಿ. ನಾಯಕ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ೫೩೫ನೇ ವ್ಯಾಸಂಗ ವಿಸ್ತರಣ ಉಪನ್ಯಾಸ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕವಿವಿ ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ. ಸಿದ್ದಪ್ಪ ಎನ್. ಮಾತನಾಡಿ, ಕವಿವಿ ಪ್ರಸಾರಾಂಗ ವಿಭಾಗವು ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ್ಯ ಬಿತ್ತರಿಸಲು ಅನೇಕ ಸರಣಿ ಉಪನ್ಯಾಸಗಳನ್ನು ವಿವಿಧ ಕಾಲೇಜುಗಳಲ್ಲಿ ಆಯೋಜಿಸಿದೆ ಹಾಗೂ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು.ಮುಖ್ಯ ಅತಿಥಿ ಕೆನರಾ ಕಾಲೇಜ್ ಸೊಸೈಟಿ ಸದಸ್ಯ ವಸಂತ ಪಿ. ಶಾನಭಾಗ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಪ್ರೀತಿ ಪಿ. ಭಂಡಾರಕರ್ ಮಾತನಾಡಿ, ಶಿಕ್ಷಕ ವಿದ್ಯಾರ್ಥಿಗಳು ಸದಾ ಅಧ್ಯಯನಮುಖಿಯಾಗಿರಬೇಕು. ಜ್ಞಾನ ಜಗತ್ತನ್ನು ಆಳುತ್ತಿದೆ. ಜ್ಞಾನದಿಂದ, ಸಾಮರ್ಥ್ಯದಿಂದ ಮತ್ತು ಕೌಶಲ್ಯದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಮಾಜದಲ್ಲಿ ಜ್ಞಾನವಂತರಾಗಿ ಎಂದರು.
ಉದ್ಯಮಿ ಸುಜಾತಾ ಶಾನಭಾಗ ಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಉದ್ಯೋಗಗಳು ಮತ್ತು ಕೌಶಲ್ಯಾಭಿವೃದ್ಧಿ ಕುರಿತು ಹಾಗೂ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಂಪ್ಯೂಟರ್ ಸೈನ್ಸ ಮುಖ್ಯಸ್ಥ ದಿನೇಶ ಎಂ. ಬಾಳಗಿ ಉನ್ನತ ಶಿಕ್ಷಣದಲ್ಲಿ ಕಂಪ್ಯೂಟರ್ ಶಿಕ್ಷಣದ ಮಹತ್ವ ಕುರಿತು, ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಡಿ. ನಾಯಕ, ಕರಾವಳಿ ನಾಡಿನ ಸಾಂಸ್ಕೃತಿಕ ಚಿಂತನೆ ಕುರಿತು ವಿಶೇಷ ಉಪನ್ಯಾಸ ಮಾಡಿದರು.ಸನತ್ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕೆ. ಭಟ್ ಸ್ವಾಗತಿಸಿ ಪರಿಚಯಿಸಿದರು. ಪ್ರಾಧ್ಯಾಪಕ ಉಮೇಶ ನಾಯ್ಕ ಎಸ್.ಜೆ. ವಂದಿಸಿದರು. ಶಿಕ್ಷಕ ವಿದ್ಯಾರ್ಥಿಗಳಾದ ಸ್ವಾತಿ ಹೆಗಡೆ, ಸಹನಾ ದೇವಳಿ ಕಾರ್ಯಕ್ರಮ ನಿರೂಪಿಸಿದರು.