ಸಾರಾಂಶ
ಹೊಸಕೋಟೆ: ಮನೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ದಂಡಿಸಿ ಅವಮಾನಿಸುವ ಬದಲು ಸಮಾಜದಲ್ಲಿ ಸಾಧಕರ ಜೀವನಗಾಥೆ ಅರ್ಥೈಸಿ ಪ್ರೇರಣೆ ನೀಡಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಆಂಜಿನಪ್ಪ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರದ ಕೆಎಂಆರ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆಗೆ ಬಡತನ ಎಂದಿಗೂ ಅಡ್ಡಿಯಲ್ಲ, ಬಡತನ-ಸಿರಿತನ ಪಕ್ಕಕ್ಕಿಟ್ಟು ವಿದ್ಯಾರ್ಥಿಗಳು ನಿರ್ದಿಷ್ಠ ಗುರಿ ಇಟ್ಟುಕೊಂಡು ಓದಬೇಕು. ನಿರಂತರ ಅಭ್ಯಾಸ, ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧನೆ ಮಾಡಬಹುದು. ನಾನು ಓರ್ವ ಸಾಮಾನ್ಯ ರೈತನ ಮಗ. ವೈದ್ಯನಾದೆ, ನೂರಾರು ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸಿದ್ದೇನೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಛಲವಿರಬೇಕು. ಶೈಕ್ಷಣಿಕ ಗುರಿ ಇರಬೇಕು. ಅದಕ್ಕೆ ಸಾಧಕರ ಯಶೋಗಾಥೆಗಳನ್ನು ಅಧ್ಯಯನ ಮಾಡಬೇಕು ಅದಕ್ಕೆ ಪೋಷಕರು ಸ್ಫೂರ್ತಿ ನೀಡಬೇಕು ಎಂದರು.ರಾಜ್ಯ ರೆಡ್ಡಿ ಜನ ಸಂಘದ ನಿರ್ದೇಶಕ ಎಂಎ.ಕೃಷ್ಣಾರೆಡ್ಡಿ ಮಾತನಾಡಿ, ಮಕ್ಕಳಿಗೆ ಮನೆಪಾಠ ಮಾಡಲು ಗ್ರಾಮಕ್ಕೆ ಬಂದ ಶಿಕ್ಷಕ ರೇವಣಿಸಿದ್ದಯ್ಯ ಹಳ್ಳಿಯಲ್ಲಿ ಕೆಎಂಆರ್ ಶಾಲೆ ಪ್ರಾರಂಭಿಸಿ ಸಹಸ್ರಾರು ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುರುಕುಲ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಪ್ರತಿ ವರ್ಷ ಶೇ.100ರಷ್ಟು ಫಲಿತಾಂಶ ಪಡೆದು ಸಾಧನೆಯ ಮೈಲಿಗಲ್ಲನ್ನು ಸೃಷ್ಠಿಸಿದ್ದಾರೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬೀಳುತ್ತಿರುವ ಪರಿಣಾಮ ಓದಿನಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಮನೆಯಲ್ಲಿ ಟಿವಿ, ಮೊಬೈಲ್‌ನಿಂದ ಮಕ್ಕಳನ್ನು ದೂರವಿಟ್ಟು ಓದಿನತ್ತ ಗಮನ ಕೇಂದ್ರೀಕರಿಸಬೇಕು ಎಂದರು.ಬೆಂಗಳೂರು ಎಸ್‌ಜೆಆರ್ ಶಾಲೆ ಪ್ರಾಂಶುಪಾಲೆ ಪ್ರೇಮಾ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಅಡಿಪಾಯವಾಗಿದ್ದು, ಮಕ್ಕಳನ್ನು ಬಾಲ್ಯದಿಂದಲೆ ಅಧ್ಯಯನ ಶೀಲರಾಗಿ ಮಾಡುವಲ್ಲಿ ಮನೆಯಲ್ಲಿ ಓದುವ ವಾತಾವರಣ ಕಲ್ಪಿಸಬೇಕು. ಬಳಿಕ ಶಾಲೆಯಲ್ಲಿ ಶಿಕ್ಷಕರ ಪಾತ್ರವೂ ಮುಖ್ಯ. ಉತ್ತರ ಭಾರತದವರು ಸಾಕಷ್ಟು ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ಪರೀಕ್ಷೆ ಬರೆಯುತ್ತಾರೆ. ದಕ್ಷಿಣ ಭಾರತದ ಮಕ್ಕಳು ಕೂಡ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸ್ಮರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಸ್ಥಾನಗಳಿಸಬೇಕು ಎಂದು ತಿಳಿಸಿದರು.
ಬಿಜಿಎಸ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಆರತಿ ಚೌಧರಿ, ರಾಜ್ಯ ರೆಡ್ಡಿಜನ ಸಂಘದ ನಿರ್ದೇಶಕ ಎಂಎ.ಕೃಷ್ಣಾರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಕೆಎಂಆರ್ ಶಾಲೆ ಸಂಸ್ಥಾಪಕ ಅಧ್ಯಕ್ಷ ರೇವಣ ಸಿದ್ಧೇಶ್ವರ, ಕಾರ್ಯದರ್ಶಿ ಚೇತನ, ಪ್ರಾಂಶುಪಾಲ ಶ್ರೀಕಾಂತ್ ಕುಮಾರ್ ಹಾಜರಿದ್ದರು.ಫೋಟೋ: 6 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದ ಕೆಎಂಆರ್ ಪಬ್ಲಿಕ್ ಶಾಲೆಯ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪ್ರತಿಭಾ ವಿದ್ಯಾರ್ಥಿಗಳನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಧ್ಯಕ್ಷ ಡಾ.ಆಂಜಿನಪ್ಪ ಅಭಿನಂದಿಸಿದರು.