ಪುಟ್‌ಬಾಲ್ ಆಟ ಮುಂಚೂಣಿಗೆ ತರಲು ಎಲ್ಲರ ಸಹಕಾರ ಅಗತ್ಯ

| Published : Feb 06 2024, 01:30 AM IST

ಸಾರಾಂಶ

ಜಿಲ್ಲೆಯಲ್ಲಿ ಪುಟ್‌ಬಾಲ್ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಸಕ್ತರು ಹೆಚ್ಚಿನ ಸಹಕಾರ ನೀಡಬೇಕು ಎಂದು ಜಿಲ್ಲಾ ಪುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಕೆಲ್ಲಂಬಳ್ಳಿ ಸೋಮಶೇಖರ್ ತಿಳಿಸಿದರು.

ಕೆಲ್ಲಂಬಳ್ಳಿ ಸೋಮಶೇಖರ್ ಅಭಿಮತ । ನಗರದಲ್ಲಿ ಪ್ರಪ್ರಥಮ ಬಾರಿಗೆ ಪುಟ್‌ಬಾಲ್ ಲೀಗ್ ಪಂದ್ಯಾವಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಪುಟ್‌ಬಾಲ್ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಸಕ್ತರು ಹೆಚ್ಚಿನ ಸಹಕಾರ ನೀಡಬೇಕು ಎಂದು ಜಿಲ್ಲಾ ಪುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಕೆಲ್ಲಂಬಳ್ಳಿ ಸೋಮಶೇಖರ್ ತಿಳಿಸಿದರು.

ನಗರದ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪುಟ್‌ಬಾಲ್ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಆರಂಭವಾದ ಪುಟ್‌ಬಾಲ್ ಲೀಗ್ ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪುಟ್‌ಬಾಲ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜ್ಯ ಹಾಗೂ ಅಂತರ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇತ್ತಿಚಿನ ದಿನಗಳಲ್ಲಿ ಇತರೆ ಆಟಗಳಿಂದಾಗಿ ಪುಟ್‌ಬಾಲ್ ಆಟಗಾರರು ಕಡಿಮೆಯಾದರು. ಜೊತೆಗೆ ಯುವ ಆಟಗಾರರಿಗೆ ಪ್ರೋತ್ಸಾಹ ಕಡಿಮೆಯಾಗಿತ್ತು. ಈಗ ರಾಜ್ಯ ಪುಟ್‌ಬಾಲ್ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಸಮಿತಿಯನ್ನು ರಚನೆ ಮಾಡಿಕೊಂಡು ಪ್ರಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಲೀಗ್ ಹಂತ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ೧೦ತಂಡಗಳು ಭಾಗವಹಿಸಲಿದ್ದು ಪ್ರತಿ ಭಾನುವಾರ ಬೆಳಗಿನ ಅವಧಿಯಲ್ಲಿ ಪಂದ್ಯಗಳು ನಡೆಯಲಿದೆ. ೧೦ ವಾರಗಳು ಸತತವಾಗಿ ಲೀಗ್ ಪಂದ್ಯಗಳು ನಡಯಲಿದ್ದು, ಚಾ.ನಗರ ವಿವಿಧ ತಾಲೂಕುಗಳಲ್ಲದೇ ನರಸೀಪುರದ ತಂಡವು ಸಹ ಭಾಗವಹಿಸಲಿದೆ. ಯುವ ಆಟಗಾರರು ಪುಟ್‌ಬಾಲ್ ಬಗ್ಗೆ ಹೆಚ್ಚಿನ ಅಸಕ್ತಿಯನ್ನು ಹೊಂದಿ ತರಬೇತಿ ಪಡೆದು ಜಿಲ್ಲಾ ಹಾಗೂ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವಂತೆ ಹೇಳಿದರು.

ಖ್ಯಾತ ವೈದ್ಯ ಡಾ.ವಿಕಾಶ್‌ಹನುಸೋಗೆ ಅವರು ಪುಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಚಾಮರಾಜನಗರದಲ್ಲಿ ಪುಟ್‌ಬಾಲ್ ಸಂಸ್ಥೆ ಇಲ್ಲ ಎಂಬ ಕೊರಗಿದೆ. ಜಿಲ್ಲಾ ಸಂಸ್ಥೆಯು ಉತ್ತಮವಾದ ಪಂದ್ಯಾವಳಿಯನ್ನು ಸಂಘಟನೆ ಮಾಡಿದೆ. ನಾನು ಸಹ ಒಂದು ತಂಡವನ್ನು ಪಡೆದುಕೊಂಡಿದ್ದು, ಯುವಕರು ಪುಟ್‌ಬಾಲ್ ಆಟಕ್ಕೆ ಹೆಚ್ಚಿನ ಒಲುವು ಹೊಂದಬೇಕು. ನಮ್ಮ ಸಂಸ್ಥೆಯ ಮುಖಾಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನವನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಅಜಿತ್ ಎಂಎಲ್, ಉಪಾಧ್ಯಕ್ಷ ಸಿಟಿ. ಬೋಪಣ್ಣ, ಖಜಾಂಚಿ ಡಾ.ಗಿರೀಶ್‌ಕುಮಾರ್ ಕಿನಕಹಳ್ಳಿ, ತೀರ್ಪುಗಾರರಾದ ಸೆಂಥಿಲ್, ಗೋಪಾಲ್ ಅಜೇಶ್, ಸಂಕೇತ್ ಹಾಗೂ ಆಟಗಾರರು ಇದ್ದರು.