ಹೊಸ ತಲೆಮಾರಿನವರು ಸದಭಿರುಚಿಯ ಚಲನಚಿತ್ರ ನೋಡಿ ಪ್ರೋತ್ಸಾಹಿಸಲಿ: ಮಾತಾ ಮಂಜಮ್ಮ ಜೋಗತಿ

| Published : Jul 13 2024, 01:37 AM IST

ಹೊಸ ತಲೆಮಾರಿನವರು ಸದಭಿರುಚಿಯ ಚಲನಚಿತ್ರ ನೋಡಿ ಪ್ರೋತ್ಸಾಹಿಸಲಿ: ಮಾತಾ ಮಂಜಮ್ಮ ಜೋಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಿಗರು ಅದರಲ್ಲೂ ಹೊಸ ತಲೆಮಾರಿನವರು ಸದಭಿರುಚಿಯ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕು.

ಬಳ್ಳಾರಿ: ಕನ್ನಡ ಭಾಷೆಯ ಸದಭಿರುಚಿಯ ಚಲನಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ಜಾನಪದ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಹೇಳಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಟಕ ವಿಭಾಗದ ವತಿಯಿಂದ ಆಯೋಜಿಸಿದ್ದ "ಕುಬಸ " ಚಲನಚಿತ್ರ ಪ್ರಚಾರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಿಗರು ಅದರಲ್ಲೂ ಹೊಸ ತಲೆಮಾರಿನವರು ಸದಭಿರುಚಿಯ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಈ ರೀತಿಯ ಚಿತ್ರಗಳನ್ನು ಹೆಚ್ಚು ಜನರು ನೋಡುವುದರಿಂದ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಸಹಕಾರಿಯಾದತಾಗುತ್ತದೆ ಎಂದರು.

ಕುಂ.ವೀರಭದ್ರಪ್ಪ ಬರೆದ "ಕುಬಸ " ಸಣ್ಣ ಕಥೆ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಬದುಕಿನುದ್ದಕ್ಕೂ ಕುಬಸ ಹಾಕದೇ ಜೀವನ ಸಾಗಿಸಿದ ಭೋವಿ ಸಮುದಾಯದ ಮಹಿಳೆಯ ಕಥೆಯಿದು. ಇದರಲ್ಲಿ ಆಕೆಯ ಪ್ರೇಮ, ನೋವು, ನಿಟ್ಟುಸಿರು, ತಲ್ಲಣಗಳಿವೆ. ಸಂಕಷ್ಟಗಳ ಬದುಕನ್ನು ದಿಟ್ಟತನದಿಂದ ಎದುರಿಸಿ ಯಶಸ್ವಿಯಾದ ಮಹಿಳೆಯ ಜೀವನಾನುಭವ ಕಥೆಯೊಂದು ಚಲನ ಚಿತ್ರದುದ್ದಕ್ಕೂ ತೆರೆದುಕೊಂಡಿದೆ ಎಂದರು.

ಚಿತ್ರದ ವಿಶೇಷವೆಂದರೆ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಬಳ್ಳಾರಿ ಜಿಲ್ಲೆಗೆ ಸೇರಿದವರು. ನಮ್ಮವರನ್ನು ನಾವೇ ಬೆಳೆಸಿ ಪ್ರೋತ್ಸಾಹಿಸಬೇಕು. ಆ ಕಾರಣಕ್ಕಾಗಿ ಹೆಚ್ಚು ಜನ ಈ ಸಿನಿಮಾವನ್ನು ನೋಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಚ್.ಕೆ. ಮಂಜುನಾಥ ರೆಡ್ಡಿ ಮಾತನಾಡಿ, ಒಳ್ಳೆಯ ಸಿನಿಮಾ ಮನರಂಜನೆ ಜತೆ ಮೌಲ್ಯ, ಆದರ್ಶಗಳನ್ನು ಕಟ್ಟಿಕೊಡುತ್ತದೆ. ಸಂಸ್ಕೃತಿಯ ಘನತೆ ಎತ್ತಿ ಹಿಡಿಯುತ್ತದೆ ಎಂದರು.

ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ, ಸಿನಿಮಾ ನಿರ್ಮಾಪಕರಾದ ಶೋಭಾ ಆದಿನಾರಾಯಣ, ಗುಂಡಿ ಭಾರತಿ ರಮೇಶ್, ಮಾತೃ ಮಹಿಳಾ ಸಂಸ್ಥೆಯ ಪುಷ್ಪಾವತಿ, ಏಕಲವ್ಯ ಟ್ರಸ್ಟಿನ ಮಂಜುಳಾ, ಪ್ರಗತಿ ಸೇವಾ ಸಂಘದ ಚಾಂದಿನಿ, ಸಹ ನಿರ್ದೇಶಕ ಶಿವಮೂರ್ತಿ ಇದ್ದರು.

ನಾಟಕದ ವಿಭಾಗದ ಅತಿಥಿ ಉಪನ್ಯಾಸಕರಾದ ವಿಷ್ಣು ಹಡಪದ್, ನೇತಿ ರಘುರಾಮ್, ಲೇಖಕ ಮಲ್ಲಪ್ಪ ಉಪಸ್ಥಿತರಿದ್ದರು.