ಅಂಗವಿಕಲರ ಪ್ರತಿಭೆಗೆ ಪ್ರೋತ್ಸಾಹ ನೀಡಿ: ನಾಗರಾಜ ಭಟ್‌

| Published : Dec 04 2024, 12:31 AM IST

ಅಂಗವಿಕಲರ ಪ್ರತಿಭೆಗೆ ಪ್ರೋತ್ಸಾಹ ನೀಡಿ: ನಾಗರಾಜ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷಚೇತನರಿಗೆ ಮಾನಸಿಕ ಸ್ಥೈರ್ಯ, ಧೈರ್ಯ ತುಂಬುವ ಸಲುವಾಗಿ ವಿಶೇಷಚೇತನರ ದಿನವನ್ನು ಆಚರಿಸಲಾಗುತ್ತಿದೆ. ಇದರಿಂದ ಉಳಿದ ಮಕ್ಕಳಂತೆ ಅವರಲ್ಲಿಯು ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ.

ಹೊನ್ನಾವರ: ವಿಶೇಷಚೇತನರಲ್ಲಿಯೂ ವಿಶೇಷವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಮಾತ್ರ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಪಪಂ ಅಧ್ಯಕ್ಷ ನಾಗರಾಜ ಭಟ್ ಹೇಳಿದರು.

ಪಟ್ಟಣದ ಪ್ರಭಾತನಗರದ ಸರ್ಕಾರಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷಚೇತನರಿಗೆ ಮಾನಸಿಕ ಸ್ಥೈರ್ಯ, ಧೈರ್ಯ ತುಂಬುವ ಸಲುವಾಗಿ ವಿಶೇಷಚೇತನರ ದಿನಾಚರಣೆ ಆಚರಿಸಲಾಗುತ್ತಿದೆ. ಇದರಿಂದ ಉಳಿದ ಮಕ್ಕಳಂತೆ ಅವರಲ್ಲಿಯು ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಾತನಾಡಿ, ಎಲ್ಲ ವಿಶೇಷಚೇತನ ವಿದ್ಯಾರ್ಥಿಗಳು ಮಾಸಾಶನ ಪಡೆಯುವಂತಾಗಬೇಕು. ಶಿಕ್ಷಕ ವೃಂದದವರು ಈ ನಿಟ್ಟಿನಲ್ಲಿ ಸಹಕರಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ತಂದೆ-ತಾಯಿಗಳು ಮಾಹಿತಿ ಪಡೆದಿರಬೇಕು. ಇಲಾಖೆಯಿಂದ ಬೇಕಾಗುವ ಮಾರ್ಗದರ್ಶನ, ಮಾಹಿತಿ ನೀಡುತ್ತೇವೆ ಎಂದರು.

ಪಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭೆಗಳಿಗೆ ಪ್ರೋತ್ಸಾಹಿಸಿದಾಗ ಅವರ ಮುಂದಿನ ಹಂತದ ಸಾಧನೆಗೆ ಸ್ಫೂರ್ತಿ ಸಿಕ್ಕಂತಾಗುತ್ತದೆ. ಶಿಕ್ಷಣ ಇಲಾಖೆ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಾರೆ ಎಂದರು.

ಪಪಂ ಸದಸ್ಯೆ ಮೇಧಾ ನಾಯ್ಕ ಮಾತನಾಡಿ, ದೇಹಕ್ಕೆ ವಿಕಲಚೇತನರಾದರು ಮನಸ್ಸಿಗೆ ವಿಕಲಚೇತನರಲ್ಲ. ಪಾಲಕರಾದವರು ಇವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ವಿಶೇಷಚೇತನರು ಹೆಚ್ಚು ನಿಂದನೆಗೊಳಗಾಗುತ್ತಾರೆ. ಅವರ ಮಾನಸಿಕ ಸಾಮರ್ಥ್ಯ ಕುಗ್ಗಿಸುವ ಬದಲು ಅವರಲ್ಲಿರುವ ವಿಶೇಷ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿಶೇಷಚೇತನ ವಿದ್ಯಾರ್ಥಿಗಳಾದ ತೇಜಸ್ವಿನಿ ಗೌಡ, ಯಶವಂತ ಮರಾಠಿ, ನಾಗೇಂದ್ರ ಮುಕ್ರಿ, ಸಯಾಸ್ ಜಾಫರ್ ಅವರನ್ನು ಸನ್ಮಾನಿಸಲಾಯಿತು. ಪೆದ್ರು ಪೊವೆಡಾ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಬಿಆರ್‌ಪಿಗಳಾದ ಎಂ.ಆರ್. ಭಟ್, ಗಜಾನನ ನಾಯ್ಕ, ಬಿಐಆರ್‌ಟಿ ರಾಮಚಂದ್ರ ಹಳದೀಪುರ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಸುಧೀಶ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೇಸ್ತ, ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ, ಮುಖ್ಯಾಧ್ಯಾಪಕಿ ವಿಜಯಾ ಶೇಟ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಹೊನ್ನಿ ಮುಕ್ರಿ, ಗಿರಿಜಾ ಗೌಡ ಹಾಗೂ ವಿದ್ಯಾರ್ಥಿಗಳು ಇದ್ದರು.