ಕೃಷಿಯಲ್ಲಿ ಅನ್ವೇಷಣಾ ಭಾವನೆ ಹೊಂದಿರುವವರನ್ನು ಪ್ರೋತ್ಸಾಹಿಸಿ: ನಿಶ್ಚಲಾನಂದನಾಥ ಸ್ವಾಮೀಜಿ

| Published : Jul 24 2025, 12:52 AM IST

ಕೃಷಿಯಲ್ಲಿ ಅನ್ವೇಷಣಾ ಭಾವನೆ ಹೊಂದಿರುವವರನ್ನು ಪ್ರೋತ್ಸಾಹಿಸಿ: ನಿಶ್ಚಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತನ ಮಗನಾಗಿ ಹುಟ್ಟಿದ ಊರಿಗೆ, ರೈತ ಸಮುದಾಯಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ಹಂಬಲ ಹೊಂದಿರುವ ರತ್ನಜ ಅವರು ಅಮೃತ ಸಮಾನವಾದ ಹಾಲು ಕೊಡುವ ರಾಸುಗಳಿಗೆ ಗುಣಮಟ್ಟದ ಫೀಡ್ಸ್, ಸೈಲೇಜ್‌ನ ಪಶು ಆಹಾರ ಉತ್ಪಾದನೆಗೆ ಮುಂದಾಗಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿಯಲ್ಲಿ ಅನ್ವೇಷಣಾ ಭಾವನೆ ಹೊಂದಿರುವವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬೆಂಗಳೂರಿನ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಹನಕೆರೆ ಗ್ರಾಮದಲ್ಲಿ ಪ್ರಗತಿಪರ ರೈತ, ಚಲನಚಿತ್ರ ನಿರ್ದೇಶಕ ಹನಕೆರೆ ರತ್ನಜ (ಎಚ್.ಬಿ.ಪ್ರಕಾಶ್) ಅವರು ಸ್ಥಾಪಿಸಿರುವ ಜರ್ಮಿನೋ ಫೀಡ್ಸ್ ಘಟಕದ ಉದ್ಘಾಟನೆ, ಜರ್ಮಿನೋ ಫೀಡ್ಸ್ ಮತ್ತು ಸೈಲೇಜ್(ರಸಮೇವು) ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೊಡ್ಡ ದೊಡ್ಡ ದಾರ್ಶನಿಕರು ನಿಸರ್ಗ ಮತ್ತು ಕೃಷಿಗೆ ಮತ್ತೆ ಹಿಂದಿರುಗಿ ಎಂದಿದ್ದಾರೆ. ಎಂದಾದರೂ ಒಂದು ದಿನ ಪಟ್ಟಣ, ನಗರಗಳಲ್ಲಿರುವವರು ಮತ್ತೆ ಹಳ್ಳಿಗಳಿಗೆ ಹಿಂದಿರುಗಿ ಕೃಷಿ ಅವಲಂಬಿಸಬೇಕಾಗುತ್ತದೆ. ಅದಕ್ಕೆ ಉತ್ತಮವಾದ ನಿದರ್ಶನ ರತ್ನಜ ಎಂದರು.

ಕುವೆಂಪು ಆಶಯದಂತೆ ನೇಗಿಲ ಯೋಗಿಯಾಗಲು ಕೃಷಿಕರಲ್ಲಿ ಅನ್ವೇಷಣಾ ಸಾಹಸ ಪ್ರವೃತ್ತಿ ಇರಬೇಕು. ಮಂಡ್ಯ ಜಿಲ್ಲೆಯು ಶೇ.100ಕ್ಕೆ ನೂರರಷ್ಟು ಕೃಷಿ ಪ್ರಧಾನ ಮತ್ತು ಕೃಷಿಕರು ವಾಸಿಸುವ ಜಿಲ್ಲೆ. ರೈತನ ಮಗನಾಗಿ ಹುಟ್ಟಿದ ಊರಿಗೆ, ರೈತ ಸಮುದಾಯಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ಹಂಬಲ ಹೊಂದಿರುವ ರತ್ನಜ ಅವರು ಅಮೃತ ಸಮಾನವಾದ ಹಾಲು ಕೊಡುವ ರಾಸುಗಳಿಗೆ ಗುಣಮಟ್ಟದ ಫೀಡ್ಸ್, ಸೈಲೇಜ್‌ನ ಪಶು ಆಹಾರ ಉತ್ಪಾದನೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಪ್ರಸ್ತುತ ಹೈನುಗಾರಿಕೆ, ಕೃಷಿ ಮಾಡುವುದು ಕಷ್ಟ. ಹೀಗಾಗಿ ರೈತರಾಗುವುದು ಬೇಡ ಅಂದುಕೊಂಡಿರುವವರಿಗೆ ರತ್ನಜ ಪ್ರಕಾಶ್ ಅವರು ಒಂದು ಬೆಳಕು ಮತ್ತು ಮಾದರಿಯಾಗಿದ್ದಾರೆ. ಇದು ಎಷ್ಟೋ ಯುವಕರಿಗೆ ಸಾಹಸಿ ಪ್ರವೃತ್ತಿಗೆ ಪ್ರೇರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ರವಿಕುಮಾರ್‌ ಮಾತನಾಡಿ, ಉದ್ಯೋಗ ಅರಸಿ ಎಲ್ಲರೂ ಬೆಂಗಳೂರಿಗೆ ಹೋಗುತ್ತಾರೆ. ಆದರೆ, ರತ್ನಜ ಅವರು ಬೆಂಗಳೂರಿನಿಂದ ಹುಟ್ಟೂರಿಗೆ ವಾಪಸ್ಸಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಅದು ರಾಜ್ಯಾದ್ಯಂತ ವಿಸ್ತರಣೆಯಾಗಲಿ ಎಂದು ಹಾರೈಸಿದರು.

ಜರ್ಮಿನೋ ಫೀಡ್ಸ್ ಮತ್ತು ಸೈಲೇಜ್‌ನ್ನು(ರಸಮೇವು) ಬಿಡುಗಡೆ ಮಾಡಿದ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಋಷಿ ಮೊದಲ, ಕೃಷಿ ಮೊದಲ ಎಂದರೆ ಕೃಷಿ ಮೊದಲು ಎನ್ನುವುದು ನನ್ನ ಮಾತು. ತಂದೆ ಸ್ಥಾನದಲ್ಲಿ ಕುಳಿತು ರತ್ನಜ ಬೆಳವಣಿಗೆ ನೋಡುತ್ತಿದ್ದೇನೆ. ಈ ಪ್ರಿಯ ಶಿಷ್ಯನಿಗೆ ಎಲ್ಲಿದ್ದರೂ ಕ್ರಿಯೇಟಿವ್ ಆಲೋಚನೆ ಎಂದರು.

ಮೂರು ಸಿನಿಮಾದಲ್ಲೂ ಗೆದ್ದರೂ ಸಿನಿಮಾ ಬಿಟ್ಟು ಇಲ್ಲಿ ಬಂದು ಹಾಲು ಕರೆಯುತ್ತಿದ್ದಾನಲ್ಲ ಅಂದುಕೊಳ್ಳುತ್ತಿದೆ. ಆದರೆ, ಎರೆಹುಳು ಆಗಿ ಕೆಲಸ ಮಾಡುತ್ತಿದ್ದಾನೆ. ನಮ್ಮ ಚಂದನವನಕ್ಕೂ ಮತ್ತೆ ಬಾ. ಅಲ್ಲಿ ನಿನ್ನ ಕೆಲಸ ಇನ್ನೂ ಇದೆ. ಎಲ್ಲಿದ್ದರೂ ಬೆಳೆಯುತ್ತೀಯಾ. ಇಲ್ಲೂ ಬೆಳಿ. ಸಿನಿಮಾದಲ್ಲೂ ಬೆಳಿ. ನಿನ್ನ ಪಶುಆಹಾರ ಉತ್ಪನ್ನಗಳಿಗೆ ಬೇಕಾದರೆ ನಾನೇ ರಾಯಭಾರಿ ಆಗುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡಪ್ರಭ ಹಿರಿಯ ಪತ್ರಕರ್ತರಾದ ಜೋಗಿ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಚ್.ಪಿ.ಮಹೇಶ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಶಿವಲಿಂಗಯ್ಯ, ವಕೀಲ ಹನಕೆರೆ ಶಿವರಾಮು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ, ಪ್ರಗತಿಪರ ರೈತ ಹನಕೆರೆ ರತ್ನಜ ಇತರರು ಇದ್ದರು.