ಯುವಕರು ಜೀವನದಲ್ಲಿ ಕಾಲಹರಣ ಮಾಡದ ಬದುಕು ಕಟ್ಟಿಕೊಳ್ಳುವ ಮೂಲಕ ಜವಾಬ್ದಾರಿಯಿಂದ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಲು ಒಳ್ಳೆ ಉದ್ಯೋಗ ಪಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.

ಮಳವಳ್ಳಿ:

ಪಟ್ಟಣದ ದೊಡ್ಡಕೆರೆ ಮಹದೇಶ್ವರ ದೇವಸ್ಥಾನದ ಬಳಿ ಗಂಗಾ ಪರಮೇಶ್ವರಿ ಯುವಕರ ಬಳಗದಿಂದ ಮೊದಲ ವರ್ಷದ ರಾಜ್ಯ ಮಟ್ಟದ ಜೋಡಿ ಹಸುಗಳ ಮತ್ತು ಚಕ್ಕಡಿ ಓಟ ಸ್ಪರ್ಧೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಪುರಾತನ ಹಾಗೂ ಜನಪ್ರಿಯ ಗ್ರಾಮೀಣ ಕ್ರೀಡೆ ಚಕ್ಕಡಿ ಓಟ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಥ ಕ್ರೀಡಾಕೂಟಗಳ ಅವಶ್ಯಕತೆ ಇದೆ. ಯುವ ಸಮೂಹ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಈ ಹಿಂದೆ ಎತ್ತಿನಗಾಡಿಗಳ ಮೂಲಕ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇತ್ತೀಚಿನ ತಂತ್ರಜ್ಞಾನದ ಯುಗದಲ್ಲಿ ಆ ಪ್ರಮಾಣ ಕಡಿಮೆಯಾಗುತ್ತಿದೆ. ವಯಸ್ಸಾದ ತಂದೆ-ತಾಯಿಗಳು ಮಕ್ಕಳ ಬಗ್ಗೆ ಅಗಾಧವಾದ ಕನಸು ಕಟ್ಟಿಕೊಂಡಿರುತ್ತಾರೆ. ಯುವಕರು ಜೀವನದಲ್ಲಿ ಕಾಲಹರಣ ಮಾಡದ ಬದುಕು ಕಟ್ಟಿಕೊಳ್ಳುವ ಮೂಲಕ ಜವಾಬ್ದಾರಿಯಿಂದ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಲು ಒಳ್ಳೆ ಉದ್ಯೋಗ ಪಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಪ್ರಸ್ತುತ ನಾಲಾ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಈ ವೇಳೆ ಹಾಗೂ ತಮ್ಮ ಬಿಡುವಿನ ಸಮಯವನ್ನು ಬಳಸಿಕೊಂಡು ಯುವಕರೆಲ್ಲರೂ ಸೇರಿ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮೂಲಕ ಯಶಸ್ಸಿಗೆ ದಾರಿಯಾಗಬೇಕು ಎಂದು ಕರೆ ನೀಡಿದರು.

ಈ ವೇಳೆ ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ. ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ದಿಲೀಪ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ.ಮಾದೇಶ್, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ಆಟೋ ಮಂಜು, ಸತ್ಯಣ್ಣ, ಬಂಕ್ ಮಹದೇವು, ಚೇತನ್ ನಾಯಕ್, ವೆಂಕಟೇಶ್, ಎಂ.ಡಿ.ಸಂತೋಷ್ ಕುಮಾರ, ಕೆ.ಶ್ರೀನಿವಾಸ್, ಬಸವರಾಜು, ಕೃಷ್ಣ, ಬಂಕ್ ಮಹದೇವು ಹಾಗೂ ಗಂಗಾಪರಮೇಶ್ವರಿ ಯುವಕರ ಬಳಗದ ಸದಸ್ಯರು ಪಾಲ್ಗೊಂಡಿದ್ದರು.