ಸಾರಾಂಶ
ಹೊಸಪೇಟೆ: ರಂಗಕಲೆ ನೋಡುಗರ ಸಂಖ್ಯೆ ಕ್ಷೀಣಿಸಿದೆಯೇ ಹೊರತು ಕಲಾವಿದರಿಂದ ರಂಗ ಕಲೆ ನಶಿಸುತ್ತಿಲ್ಲ ಎಂದು ಸಂಗಮೇಶ್ವರ ನಾಟ್ಯ ಸಂಘ ಸಂಚಾಲಕ ಮಂಜು ಗುಳೇದಗುಡ್ಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಸೆ. 20ರಿಂದ ಮೊದಲ ಬಾರಿಗೆ ಗುಳೆದಗುಡ್ಡ ಸಂಗಮೇಶ್ವರ ನಾಟ್ಯ ಸಂಘದಿಂದ ನಾಟಕ ಪ್ರದರ್ಶನವಾಗುತ್ತಿದೆ. ದಿನಕ್ಕೆ ಎರಡು ಪ್ರದರ್ಶನ ಇರಲಿದೆ. ಹುಲಿಂಗಯ್ಯ ತಾಳಿಕೋಟೆ ನಿರ್ದೇಶನದ ಹೌದಲೇ ರಂಗಿ ಊದಲೇನ ಪುಂಗಿ ಕೌಟುಂಬಿಕ ಹಾಗೂ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ. ಕಲಾ ಆಸಕ್ತರು ಮಾತ್ರವಲ್ಲದೆ ಪ್ರತಿಯೊಬ್ಬರು ಕಲೆಗೆ ಪ್ರೋತ್ಸಾಹಿಸಿ ನಾಟಕ ವೀಕ್ಷಣೆ ಮಾಡಬೇಕಿದೆ ಎಂದರು.ಈ ಹಿಂದೆ ಹಿರಿಯರು ಮನೆಗಳಲ್ಲಿ ಕಲೆ, ಸಂಗೀತ ಬಗ್ಗೆ ಮಕ್ಕಳಿಗೆ ತಿಳಿ ಹೇಳುತ್ತಿದ್ದರು. ಈಗ ಕಲೆ ಬಗ್ಗೆ ಹೇಳುವುದಕ್ಕೆ ಮುಂದಾದರೂ, ಕೇಳುವುದಕ್ಕೆ ಯಾರೂ ಸಿದ್ಧರಿಲ್ಲ. ಟಿವಿ, ಸಿನಿಮಾ ವ್ಯಾಮೋಹ ಹೆಚ್ಚಾಗಿದೆ. ಇದರಿಂದ ಕಲೆಯ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ. ಕನ್ನಡ ರಂಗಭೂಮಿ ಕಲಾವಿದರಲ್ಲಿ ಒಗ್ಗಟ್ಟು, ಒಳ್ಳೆಯ ಭಾವನೆಯಿದ್ದಲ್ಲಿ ಬೆಳೆಯುವುದಕ್ಕೆ ಏನು ಕೊರತೆಯಿಲ್ಲ. ರಂಗಭೂಮಿಯಲ್ಲಿ ನಾಟಕ, ಹವ್ಯಾಸಿ ಕಲಾವಿದ, ಬೀದಿ ನಾಟಕ, ಜಾನಪದ ಹೀಗೆ ಸಾಕಷ್ಟು ಪ್ರಕಾರಗಳಿದ್ದು, ಎಲ್ಲ ಕಲಾವಿದರು ಒಗ್ಗೂಡಿ ಸಾಕಷ್ಟು ಕಾರ್ಯ ಮಾಡಬೇಕಿದೆ. ಎಲೆಯ ಮರೆಯಂತೆ ಇರುವ ಗ್ರಾಮೀಣ ಪ್ರದೇಶದ ಕಲಾವಿದರನ್ನು ಸಂಘ-ಸಂಸ್ಥೆಗಳು ಗುರುತಿಸುವ ಕೆಲಸ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಸಹಾಯಧನ ನೀಡಬೇಕು. ಹಿರಿಯ ಕಲಾವಿದರು ನಿಮ್ಮೊಟ್ಟಿಗೆ ಕಲೆ ಮುಕ್ತಾಯಗೊಳಿಸದೇ, ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದರು.
ಮುಖಂಡರಾದ ಸಂಕ್ರಪ್ಪ ಚೌಡಾಪುರ, ಪಿ. ವೆಂಕಟೇಶ, ಭವಾನಿ ಹಿರಿಯೂರು, ಈಶ್ವರ ಹಿರೇಮಠ, ಮತ್ತಿತರರಿದ್ದರು.ಹೊಸಪೇಟೆಯ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಂಗಮೇಶ್ವರ ನಾಟ್ಯ ಸಂಘದ ಸಂಚಾಲಕ ಮಂಜು ಗುಳೆದಗುಡ್ಡ ಸೇರಿದಂತೆ ಗಣ್ಯರು ಪೋಸ್ಟರ್ ಬಿಡುಗಡೆಗೊಳಿಸಿದರು.