ಬಾಳೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳ ತರಬೇತಿ

| Published : Aug 28 2024, 12:51 AM IST

ಸಾರಾಂಶ

ನಂಜನಗೂಡು ರಸಬಾಳೆಯು ಒಂದು ಉತ್ತಮ ಬಾಳೆ ತಳಿ, ಪ್ರತಿಯೊಬ್ಬರೂ ಪ್ರತಿನಿತ್ಯ ಬಾಳೆಯನ್ನು ಉಪಯೋಗಿಸುತ್ತೇವೆ

ಕನ್ನಡಪ್ರಭ ವಾರ್ತೆ ಸುತ್ತೂರು

ಐಸಿಎಆರ್, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಉತ್ತೇಜನ ನೀಡಲು ನಡೆದ ವೈಜ್ಞಾನಿಕ ಬಾಳೆ ಕೃಷಿ ಪದ್ಧತಿಗಳು ಹಾಗೂ ನಂಜನಗೂಡು ರಸಬಾಳೆ ತಳಿ ಸಂರಕ್ಷಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಕೃಷಿ ವಿವಿ ಸಿಬ್ಬಂದಿ ತರಬೇತಿ ಘಟಕದ ತರಬೇತಿ ಸಂಯೋಜಕ ಮತ್ತು ಮುಖ್ಯಸ್ಥ ಡಾ.ಕೆ. ಶಿವರಾಮ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ನಂಜನಗೂಡು ರಸಬಾಳೆಯು ಒಂದು ಉತ್ತಮ ಬಾಳೆ ತಳಿ, ಪ್ರತಿಯೊಬ್ಬರೂ ಪ್ರತಿನಿತ್ಯ ಬಾಳೆಯನ್ನು ಉಪಯೋಗಿಸುತ್ತೇವೆ ಹಾಗೂ ಅದರ ಪ್ರಾಮುಖ್ಯತೆ ತುಂಬಾ ಇದೆ, ಬಾಳೆ ತಳಿಗಳ ಪಟ್ಟಿಯಲ್ಲಿ ಈ ರಸಬಾಳೆಯು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ, ರೈತರೂ ಈ ತಳಿಯನ್ನು ಸಂರಕ್ಷಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ಮುಖ್ಯಅತಿಥಿಗಳು ಹಾಗೂ ಬಾಳೆ ಬೆಳೆಯ ಪ್ರಗತಿಪರ ರೈತರಾದ ಅಯರಹಳ್ಳಿಯ ಬಸವಣ್ಣನವರು ಮಾತನಾಡಿ, ಬಾಳೆ ಬೆಳೆಯು ಒಂದು ಉತ್ತಮ ಆದಾಯ ತರುವ ಪ್ರಮುಖ ಹಣ್ಣಿನ ಬೆಳೆ ಅದನ್ನು ಬೆಳೆದು ನಾನು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದೇನೆ, ಇದಕ್ಕೆ ಪ್ರಮುಖ ಕಾರಣ ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರ ಎನ್ನಲು ನನಗೆ ಹೆಮ್ಮೆ ಆಗುತ್ತದೆ ಎಂದು ಅವರು ತಿಳಿಸಿದರು,

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ರೈತರು ಭೌಗೋಳಿಕ ಹಿನ್ನೆಲೆಯುಳ್ಳ ನಮ್ಮ ನಂಜನಗೂಡು ರಸಬಾಳೆಯನ್ನು ಉಳಿಸುವುದು ಮತ್ತು ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ರೈತರು ಯಾವುದೇ ಬೆಳೆಯನ್ನು ಬೆಳೆದು ಮಾರುಕಟ್ಟೆಗೆ ಭಯ ಪಡುವ ಅವಶ್ಯಕತೆ ಇಲ್ಲ, ಪ್ರತಿಯೊಂದು ಬೆಳೆಯಲ್ಲೂ ಸಹ ಮೌಲ್ಯವರ್ಧನೆಗೆ ಅನೇಕ ಅವಕಾಶಗಳಿದ್ದು, ಕೃಷಿ ವಿಜ್ಞಾನ ಕೇಂದ್ರದಿಂದ ಮಾಹಿತಿ ಪಡೆದು ಉತ್ತಮ ಆದಾಯಗಳಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಜಿ.ಎಂ. ವಿನಯ್, ಡಾ.ವೈ.ಪಿ. ಪ್ರಸಾದ್, ಡಾ. ದೀಪಕ್ , ನಂಜನಗೂಡು ರಸಬಾಳೆ ಬೆಳೆಯುವ ಪ್ರಗತಿ ಪರ ರೈತ ನಂಜುಂಡಸ್ವಾಮಿ ಮಾತನಾಡಿದರು.

ಪ್ರಗತಿ ಪರ ರೈತರಾದ ಮಾದಪ್ಪ, ನಂಜುಂಡಸ್ವಾಮಿ, ಗುರುಪಾದಪ್ಪ, ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ದಿವ್ಯಾ, ಶಾಮರಜ್, ರಕ್ಷಿತ್ ರಾಜ್, ಗಂಗಪ್ಪ ಹಿಪ್ಪರಗಿ ಹಾಗೂ ರೈತರೂ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.