ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಒತ್ತುವರಿ ಕಟ್ಟಡ, ಅಂಗಡಿಗಳು

| Published : May 25 2025, 01:43 AM IST

ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಒತ್ತುವರಿ ಕಟ್ಟಡ, ಅಂಗಡಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು- ಕೊಪ್ಪ ರಸ್ತೆ ಅಭಿವೃದ್ಧಿಗೆ ಅಡ್ಡಿ ಉಂಟಾಗಿದ್ದ ಪಟ್ಟಣದ ಶಿವಪುರದ ಕೊಪ್ಪ ವೃತ್ತದ ಅಕ್ರಮ ಒತ್ತುವರಿ ಕಟ್ಟಡ ಮತ್ತು ಅಂಗಡಿಗಳನ್ನು ಅಧಿಕಾರಿಗಳು, ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ಶನಿವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು- ಕೊಪ್ಪ ರಸ್ತೆ ಅಭಿವೃದ್ಧಿಗೆ ಅಡ್ಡಿ ಉಂಟಾಗಿದ್ದ ಪಟ್ಟಣದ ಶಿವಪುರದ ಕೊಪ್ಪ ವೃತ್ತದ ಒತ್ತುವರಿ ಕಟ್ಟಡ ಮತ್ತು ಅಂಗಡಿಗಳನ್ನು ಅಧಿಕಾರಿಗಳು, ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ಶನಿವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಒತ್ತುವರಿ ತೆರವುಗೊಳಿಸುವ ವೇಳೆ ಕಟ್ಟಡಗಳ ಮತ್ತು ಅಂಗಡಿಗಳ ಮಾಲೀಕರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗೆ ಇಳಿದು ರಂಪಾಟ ನಡೆಸಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಮಧ್ಯಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಪುರಸಭೆಯ 21ನೇ ವಾರ್ಡ್ ಗೆ ಸೇರಿದ ಕೊಪ್ಪ ಸರ್ಕಲ್ ನಲ್ಲಿ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಕೆಲವರು ಅಕ್ರಮವಾಗಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡು ಅಂಗಡಿ- ಮಳಿಗೆ ತೆರೆದು ಬಾಡಿಗೆ ನೀಡಿದ್ದರೆ ಮತ್ತೆ ಕೆಲವರು ಕಿರಾಣಿ, ಕೋಳಿ ಅಂಗಡಿ ಮತ್ತು ಹೋಟೆಲ್‌ಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.

ಇದರಿಂದ ಮದ್ದೂರು- ಕೊಪ್ಪ ಮಾರ್ಗದ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣಕ್ಕೆ ಅಡ್ಡಿ ಉಂಟಾಗಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಅಕ್ರಮ ಕಟ್ಟಡ ಮತ್ತು ಅಂಗಡಿಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಮೌಖಿಕವಾಗಿ ಸೂಚನೆ ನೀಡಿದ್ದರೂ ಸಹ ಒತ್ತುವರಿದಾರರು ತೆರವು ಮಾಡದೆ ನಿರ್ಲಕ್ಷ್ಯ ವಹಿಸಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಗೌಪ್ಯ ಸಭೆ ನಡೆಸಿದ ಅಧಿಕಾರಿಗಳು ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಅವಕಾಶವಾಗದಂತೆ ಶನಿವಾರ ಮುಂಜಾನೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ತೀರ್ಮಾನ ಕೈಗೊಂಡಿದ್ದರು.

ಶನಿವಾರ ಮುಂಜಾನೆ 7 ಗಂಟೆ ಸುಮಾರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡ ಕೊಪ್ಪ ರಸ್ತೆಯ ಎಡಭಾಗದಲ್ಲಿದ್ದ ಎಸ್.ಎಸ್.ಸ್ಯಾರಿ ಸೆಂಟರ್, ಜಿ.ಬಿ.ಬೇಕರಿ, ಬಲಭಾಗದ ಸಮೃದ್ಧ ಲಾಡ್ಜ್ ನ ಮುಂಭಾಗದ ಶೀಟ್, ಹೋಟೆಲ್, ಕೋಳಿ ಅಂಗಡಿ ಸೇರಿದಂತೆ 4 ಅಕ್ರಮ ಕಟ್ಟಡ ಹಾಗೂ 7 ಪೆಟ್ಟಿಗೆ ಅಂಗಡಿಗಳನ್ನು ಜೆಸಿಪಿ ಯಂತ್ರದ ಸಹಾಯದಿಂದ ನೆಲಸಮಗೊಳಿಸಲಾಯಿತು.

ಶಿವಪುರದ ಕೊಪ್ಪ ಸರ್ಕಲ್ ನಿಂದ ರೈಲ್ವೆ ಮೇಲ್ ಸೇತುವೆ ನಂತರ ಮದ್ದೂರು ಮತ್ತು ಕೊಪ್ಪ ರಸ್ತೆಯು ದೇಶಹಳ್ಳಿ, ಬೆಸಗರಹಳ್ಳಿ ಅಡ್ಡರಸ್ತೆ, ಆನೆದೊಡ್ಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ರಸ್ತೆ ಶಿಥಿಲಗೊಂಡು ಗುಂಡಿ ಬಿದ್ದು ಅದ್ವಾನಗೊಂಡಿದ್ದ ಕಾರಣ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿತ್ತು.

ಆದರೆ, ಶಿವಪುರದ ಕೊಪ್ಪ ಸರ್ಕಲ್ ನಲ್ಲಿ ಎಡ ಮತ್ತು ಬಲಭಾಗದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅಕ್ರಮ ಕಟ್ಟಡ ಮತ್ತು ಅಂಗಡಿಗಳು ಅಡ್ಡಿ ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಸೂಚನೆ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿಯನ್ನು ತೆರವುಗೊಳಿಸಿದರು.

ಮದ್ದೂರು ಠಾಣೆ ವೃತ್ತ ನಿರೀಕ್ಷಕ ಶಿವಕುಮಾರ, ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ, ಪಿಎಸ್ಐಗಳಾದ ಮಂಜುನಾಥ್, ನರೇಶ್. ಲೋಕೇಶ್, ಸಂಚಾರಿ ಠಾಣೆ ಪಿಎಸ್ಐಗಳಾದ ರಾಮಸ್ವಾಮಿ, ಕಮಲಾಕ್ಷಿ ಸೇರಿದಂತೆ ಮಳವಳ್ಳಿ ಉಪ ವಿಭಾಗದ ವಿವಿಧ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.